ಕೇಂದ್ರ ಸಚಿವ ಮತ್ತು ಬೇಗುಸರಾಯ್‌ನ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರಿಗೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟವನ್ನು ಪ್ರದರ್ಶಿಸಿ ʼಗೋ ಬ್ಯಾಕ್ʼ ಘೋಷಣೆಗಳನ್ನು ಕೂಗಿದ್ದು, ಕೇಂದ್ರ ಸಚಿವರು ಭಾರೀ ಮುಜುಗರವನ್ನು ಎದುರಿಸಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆಗಳಿಗೆ ಪ್ರಚಾರದಲ್ಲಿದ್ದ ಗಿರಿರಾಜ್ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಚ್ವಾಡಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬಿಜೆಪಿಯ ಕಾರ್ಯಕರ್ತರ ಗುಂಪು ಆಕ್ರೋಶಗೊಂಡು ‘ಗಿರಿರಾಜ್ ಸಿಂಗ್, ಗೋ ಬ್ಯಾಕ್’ ಮತ್ತು ‘ಗಿರಿರಾಜ್ ಸಿಂಗ್ ಮುರ್ದಾಬಾದ್’ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದಾರೆ. ಇದಲ್ಲದೆ ಪ್ರತಿಭಟನೆ ನಿರತ ಬಿಜೆಪಿ ಕಾರ್ಯಕರ್ತರು ಕೇಂದ್ರ ಸಚಿವರ ಬೆಂಗಾವಲು ಪಡೆಯ ವಾಹನವನ್ನು ತಡೆಯಲು ಯತ್ನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯ ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ತಮ್ಮ ಸ್ವಕ್ಷೇತ್ರದಲ್ಲಿ ಪ್ರತಿಭಟನಾಕಾರರು ಏಕಾಏಕಿ ಆಕ್ರೋಶ ವ್ಯಕ್ತಪಡಿಸಿರುವುದರಿಂದ ಸಿಂಗ್ ಮುಜುಗರಕ್ಕೆ ಒಳಗಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಅವ್ಯವಹಾರ ಎಸಗಲಾಗಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಚ್‌ವಾಡ ಬ್ಲಾಕ್‌ನ ರಾಣಿ ಗ್ರಾಮದ ವಿನೋದ್ ರೈ ಸೇರಿದಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಪೆಪ್ಸಿ ಸ್ಥಾವರದಲ್ಲಿ ಬೇಗುಸರಾಯ್‌ನ ಯಾರೊಬ್ಬರಿಗೂ ಉದ್ಯೋಗ ಕೊಟ್ಟಿಲ್ಲ ಎಂದು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದವರು ಹೇಳಿದ್ದಾರೆ. ಗಿರಿರಾಜ್ ಸಿಂಗ್ ಅವರಿಗೆ ಐದರಿಂದ ಹತ್ತು ಲಕ್ಷ ರೂಪಾಯಿ ನೀಡಿದವರಿಗೆ ಮಾತ್ರ ಉದ್ಯೋಗ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆದರೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಸ್ವಾಗತಿಸಲು ಪಕ್ಷದ ಕಾರ್ಯಕರ್ತರು ರಸ್ತೆಬದಿಯಲ್ಲಿದ್ದರು, ಸಿಪಿಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಕಪ್ಪು ಬಾವುಟ ಮತ್ತು ಬಿಜೆಪಿಯ ಬಾವುಟ ಹಿಡಿದುಕೊಂಡು ಬಿಜೆಪಿ ಕಾರ್ಯಕರ್ತರು ಸಚಿವರಿಗೆ ಧಿಕ್ಕಾರ ಕೂಗುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
बीजेपी सांसद गिरिराज सिंह को उनके संसदीय क्षेत्र में बीजेपी कार्यकर्ताओं ने काले झंडे दिखाए। pic.twitter.com/j7OmTGtg9U
— Lutyens Media (@LutyensMediaIN) March 10, 2024
ಲೋಕಸಭಾ ಚುನಾವಣೆ ಹಿನ್ನೆಲೆ ತಮ್ಮ ಸ್ವಕ್ಷೇತ್ರದಲ್ಲಿ ಗಿರಿರಾಜ್ ಸಿಂಗ್ ಸಕ್ರಿಯರಾಗಿದ್ದರು. ಚುನಾವಣೆಯ ಹಿನ್ನೆಲೆ ತನ್ನ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ, ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದರು.
ಜಿಲ್ಲೆಯ ಬಚ್ವಾಡಾ ಬ್ಲಾಕ್‌ನ ರಾಣಿ ಚೌಕ್ ಬಳಿ ರಾಷ್ಟ್ರೀಯ ಹೆದ್ದಾರಿ-28 ರಲ್ಲಿ ಕೇಂದ್ರ ಸಚಿವರ ಬೆಂಗಾವಲು ವಾಹನವನ್ನು ತಡೆಹಿಡಿಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರು ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ಈ ಕುರಿತು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಮುಖ್ಯ ಚುನಾವಣಾ ಆಯುಕ್ತರ ನಡುವಿನ ಭಿನ್ನಾಭಿಪ್ರಾಯದಿಂದಲೇ ಅರುಣ್ ಗೋಯೆಲ್ ರಾಜೀನಾಮೆ?


