Homeಕರ್ನಾಟಕಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಿಎಂ ಬಿ‌ಎಸ್‌ವೈ ವಿರುದ್ಧ ಎಫ್ಐಆರ್ ದಾಖಲು

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಿಎಂ ಬಿ‌ಎಸ್‌ವೈ ವಿರುದ್ಧ ಎಫ್ಐಆರ್ ದಾಖಲು

- Advertisement -
- Advertisement -

ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ ನಂತರ, ರಾಜ್ಯದ ಮತ್ತೋರ್ವ ಪ್ರಭಾವಿ ವ್ಯಕ್ತಿಯ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಗುರುವಾರ ತಡರಾತ್ರಿ, ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಕಳೆದ ಫೆಬ್ರವರಿಯಲ್ಲಿ ಬಿಎಸ್‌ವೈ ಬಾಲಕಿಗೆ ದೌರ್ಜನ್ಯ ನೀಡಿದ್ದಾರೆ ಎನ್ನಲಾಗಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥೆ ತಾಯಿ ದೂರು ನೀಡಿದ್ದಾರೆ.

ಪೋಕ್ಸೋ ಹಾಗೂ 354(A) ಅಡಿಯಲ್ಲಿ ದೂರು ದಾಖಲಾಗಿದ್ದು, ಅಪ್ರಾಪ್ತೆಯ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರದ ಬಗ್ಗೆ ಸಹಾಯಯಾಚಿಸಲು ತೆರಳಿದ್ದಾಗ ಘಟನೆ ನಡೆದಿದೆ. 9 ನಿಮಿಷಗಳ ಕಾಲ ಬಾಲಕಿ ಜತೆಗೆ ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಆ ನಂತರ ಅಪ್ರಾಪ್ತೆಯನ್ನ ಕೋಣೆ ಒಳಗೆ ಕರೆದು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಆರೋಪಿಯು ಅಪ್ರಾಪ್ತೆಯ ಖಾಸಗಿ ಅಂಗಾಗಳನ್ನ ಮುಟ್ಟಿರುವ ಬಗ್ಗೆ ದೂರು ದಾಖಲಿಸಲಾಗಿದೆ. ಕೊಠಡಿಯಿಂದ ಹೊರಬಂದ ಯಡಿಯೂರಪ್ಪ ಅವರು ತಾಯಿಯ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ರಾಜ್ಯದ ಪ್ರಭಾವಿ ರಾಜಕಾರಣಿ, ನಾಲ್ಕು ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸಿರುವ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಇದೀಗ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಗುರುವಾರ ತಡರಾತ್ರಿ ಎಫ್‌ಐಆರ್‌ ದಾಖಲಾಗಿದೆ.

ಗುರುವಾರ ಸಂಜೆ 6 ಗಂಟೆಯ ವೇಳೆಗೆ ಸಂತ್ರಸ್ತ ತಾಯಿ ಮತ್ತು ಮಗಳು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಮಹಿಳೆ ಈ ಹಿಂದೆ ಕೂಡ ಹಕವರ ವಿರುದ್ಧ ದೂರು ದಾಖಲಿಸಿದ್ದರು ಎನ್ನುವ ಕಾರಣ ನೀಡಿ, ಪೊಲೀಸರು ತಕ್ಷಣವೇ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ತಾಯಿ ಮತ್ತು ಮಗಳು ತಮಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂದು ಪಟ್ಟು ಹಿಡಿದಿದ್ದರಿಂದ, ಮಹಿಳಾಪರ ಹೋರಾಟಗಾರರು ಒತ್ತಡ ಹೇರಿದ ನಂತರ ರಾತ್ರಿ 12 ಗಂಟೆಯ ವೇಳೆಗೆ ಎಫ್‌ಐಆರ್‌ ದಾಖಲಿಸಲಾಗಿದೆ.

ಪೋಕ್ಸೋ ಕಾನೂನಿನ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿಯಲ್ಲಿ ಯಡಿಯೂರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆಯ ಸೆಕ್ಷನ್‌ 8ರ ಪ್ರಕಾರ ಆರೋಪ ಸಾಭೀತಾದಲ್ಲಿ ಕನಿಷ್ಠ ಮೂರು ವರ್ಷ, ಕೆಲವೊಮ್ಮೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು. ಜೊತೆಗೆ ದಂಡವನ್ನೂ ವಿಧಿಸಬಹುದು.

ಐಪಿಸಿ ಸೆಕ್ಷನ್ 354 (ಎ) ಲೈಂಗಿಕ ಕಿರುಕುಳಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಇಷ್ಟವಿಲ್ಲದಿದ್ದರೂ ಲೈಂಗಿಕ ಅಭಿವ್ಯಕ್ತಿಯನ್ನು ಮಾಡುವುದು, ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಯನ್ನು ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲವಾದದ್ದನ್ನು ತೋರಿಸುವುದು ಶಿಕ್ಷಾರ್ಹ ಅಪರಾಧವೆಂದು ಈ ಸೆಕ್ಷನ್ ಹೇಳುತ್ತದೆ.

ದೂರಿನಲ್ಲಿ ಏನಿದೆ?

ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ, ಎಸ್‌ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು 2024ರ ಫೆಬ್ರುವರಿ 2ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದರು. ಆ ವೇಳೆ 9 ನಿಮಿಷಗಳ ಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದ್ದರು. ಬಾಲಕಿಯು ಯಡಿಯೂರಪ್ಪನವರನ್ನು ತಾತಾ ಎಂದು ಕರೆಯುತ್ತಿದ್ದರು. ಯಡಿಯೂರಪ್ಪ ಬಾಲಕಿಯ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಬಾಲಕಿಯ ತಾಯಿ ಮಾಜಿ ಮುಖ್ಯಮಂತ್ರಿಯನ್ನು ಅಪ್ಪಾಜಿ ಎಂದು ಸಂಬೋಧಿಸುತ್ತಿದ್ದರು. ಆ ವೇಳೆ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡು ಇದ್ದರು. ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಡಿಯೂರಪ್ಪ ಹೊರಗೆ ಬಿಟ್ಟಿಲ್ಲ. ಆ ವೇಳೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಬಾಲಕಿಯು ರೂಮಿನಿಂದ ಓಡಿಬಂದು ತಾಯಿಗೆ ವಿಷಯವನ್ನು ತಿಳಿಸಿದ್ದಾರೆ. ‘ಹೀಗೇಕೆ ಮಾಡಿದಿರಿ?’ ಎಂದು ತಾಯಿ ಪ್ರಶ್ನಿಸಿದ್ದಾರೆ. “ರೇಪ್‌ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದಿದ್ದಾರೆ. ತಕ್ಷಣವೇ ಯಡಿಯೂರಪ್ಪ ಕ್ಷಮೆ ಯಾಚಿಸುತ್ತಾ, “ಈ ವಿಚಾರವನ್ನು ಹೊರಗಡೆ ಎಲ್ಲಿಯೂ ಹೇಳಬಾರದು” ಎಂದು ತಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿ ಪ್ರಸಾರವಾಗದಂತೆ ಬಿಎಸ್‌ವೈ ಬೆಂಬಲಿಗರ ಯತ್ನ:

ಯಡಿಯೂರಪ್ಪನವರ ವಿರುದ್ಧ ಸಂತ್ರಸ್ತ ಬಾಲಕಿ ಮತ್ತು ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದನ್ನು ತಿಳಿದ ಅನೇಕ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ತಡರಾತ್ರಿಯೇ ಪೊಲೀಸ್ ಠಾಣೆಗೆ ಧಾವಿಸಿದ್ದರು. ಆದರೆ, ‘ಈದಿನ.ಕಾಂ’ ಸೇರಿದಂತೆ ಕೆಲ ಜನಪರ ಇಂಗ್ಲಿಷ್ ಮಾಧ್ಯಮಗಳು ಮಾತ್ರ ಸಂಪೂರ್ಣವಾಗಿ ವರದಿ ಮಾಡಿದ್ದು, ರಾಜ್ಯದ ಪ್ರಮುಖ ಮುಖ್ಯವಾಹಿನಿ ಮಾಧ್ಯಮಗಳು ಈ ಸುದ್ದಿಯನ್ನು ಬೇಕಂತಲೇ ನಿರ್ಲಕ್ಷ್ಯ ಮಾಡಿವೆ; ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಅನಿವಾರ್ಯವಾಗಿ ಕೆಲ ಮಾಧ್ಯಮಗಳು ಸುದ್ದಿ ಮಾಡಿವೆ.

ಪೊಲೀಸ್ ಠಾಣೆಯ ಎದುರು ಜನ ಜಮಾಯಿಸದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಮಾಧ್ಯಮಗಳ ವಾಹನಗಳನ್ನು ಮತ್ತು ಪತ್ರಕರ್ತರನ್ನು ತೆರವು ಮಾಡಿಸಲಾಯಿತು. ಜೊತೆಗೆ ಬಿಎಸ್‌ವೈ ಬೆಂಬಲಿಗರು ಮಾಧ್ಯಮಗಳಲ್ಲಿ ವರದಿಯಾಗುವುದನ್ನು ತಡೆಯಲು ಠಾಣೆಯ ಬಳಿ ದೌಡಾಯಿಸಿದ್ದರು. ಬಿ.ಎಸ್.ಯಡಿಯೂರಪ್ಪನವರ ಬೆಂಬಲಿಗರು, ಮಾಧ್ಯಮದ ಪಿಆರ್‌ಒ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿ, “ಇದು ಸುಳ್ಳು ಪ್ರಕರಣ ದಾಖಲಿಸಲು ಬಂದಿದ್ದಾರೆ, ಯಾವುದೇ ಕಾರಣಕ್ಕೂ ವರದಿ ಮಾಡಬಾರದು” ಎಂದು ತಾಕೀತು ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಬಿಜೆಪಿ ಮುಖಂಡರಾದ ರುದ್ರೇಶ್ ಸೋಂಪುರ ಅವರು ಪತ್ರಕರ್ತರಿಗೆ ಬೆದರಿಕೆ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು; ಸ್ಥಳದಲ್ಲಿ ಅವರು ಕೂಗಾಟ ಜೋರಾಗಿತ್ತು. ಲೈಂಗಿಕ ಕಿರುಕುಳ ಘಟನೆಯ ನಂತರದಲ್ಲಿ ಬಿಜೆಪಿಯ ವರಿಷ್ಠರಿಗೆ ಸಂತ್ರಸ್ತರು ದೂರು ನೀಡುವ ಪ್ರಯತ್ನವನ್ನೂ ಮಾಡಿದ್ದರೆಂದು ತಿಳಿದುಬಂದಿದೆ. ಆದರೆ ಯಾವುದೇ ಕ್ರಮ ಜರುಗಿಸದೆ ಇದ್ದರಿಂದ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ; ಚುನಾವಣಾ ಬಾಂಡ್‌: ಎಸ್‌ಬಿಐ ನೀಡಿದ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಚು. ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read