ಲೋಕಸಭೆ ಚುನಾವಣೆಗೆ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ (ಮಾ.24) ಪ್ರಕಟಿಸಿದೆ. ಕರ್ನಾಟಕದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.
ಉತ್ತರ ಪ್ರದೇಶ, ಬಿಹಾರ, ಒಡಿಶಾ, ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಿಜೋರಾಂ, ಸಿಕ್ಕಿಂ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪಕ್ಷ ಬಿಡುಗಡೆ ಮಾಡಿದೆ.
The Central Election Committee of the Bharatiya Janata Party has decided on the following names for the upcoming General Elections to the Lok Sabha. Here is the fifth list. (2/3) pic.twitter.com/vA0hOQH4PV
— BJP (@BJP4India) March 24, 2024
ಐದನೇ ಪಟ್ಟಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ನವೀನ್ ಜಿಂದಾಲ್ ಅವರಿಗೆ ಉತ್ತರ ಪ್ರದೇಶದ ಕುರುಕ್ಷೇತ್ರದಿಂದ, ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಹಿಮಾಚಲ ಪ್ರದೇಶದ ಮಂಡಿಯಿಂದ ಮತ್ತು ಹೊಸ ಅಭ್ಯರ್ಥಿ ಸೀತಾ ಸೊರೆನ್ ಅವರಿಗೆ ಜಾರ್ಖಂಡ್‌ನ ದುಮ್ಕಾದಿಂದ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವೆ ಅಶ್ವಿನಿ ಚೌಬೆ ಅವರಿಗೆ ಬಿಹಾರದ ಬಕ್ಸರ್‌ನ ಟಿಕೆಟ್ ಕೈ ತಪ್ಪಿದೆ.
ವರುಣ್ ಗಾಂಧಿ ಅವರನ್ನು ಉತ್ತರ ಪ್ರದೇಶದ ಪಿಲಿಭಿತ್‌ನಿಂದ ಕೈಬಿಡಲಾಗಿದ್ದು, ಅವರ ತಾಯಿ ಮೇನಕಾ ಗಾಂಧಿಯವರಿಗೆ ಸುಲ್ತಾನ್‌ಪುರದ ಟಿಕೆಟ್ ನೀಡಲಾಗಿದೆ. ಸಂಬಲ್‌ಪುರದಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪುರಿಯಿಂದ ಸಂಬಿತ್ ಪಾತ್ರ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರ ಮಾಡಿದ್ದ ನಟ ಅರುಣ್ ಗೋವಿಲ್ ಅವರಿಗೆ ಮೀರತ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಪಿಲಿಭಿತ್‌ನಲ್ಲಿ ವರುಣ್ ಗಾಂಧಿ ಬದಲಿಗೆ ಜಿತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಂವಿಧಾನ ಬದಲಾವಣೆಯ ಹೇಳಿಕೆ ನೀಡುತ್ತಿದ್ದ ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈ ತಪ್ಪಿದೆ. ಅವರ ಬದಲಿಗೆ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವರನ್ನು ಕಣಕ್ಕಿಳಿಸಿದೆ.
ಬಿಹಾರದಲ್ಲಿ ಕೇಂದ್ರ ಸಚಿವರಾದ ಆರ್.ಕೆ ಸಿಂಗ್ ಅವರನ್ನು ಅರ್ರಾಹದಿಂದ, ನಿತ್ಯಾನಂದ್ ರೈ ಉಜಿಯಾರ್‌ಪುರದಿಂದ ಮತ್ತು ಗಿರಿರಾಜ್ ಸಿಂಗ್ ಅವರನ್ನು ಬೇಗುಸರಾಯ್‌ನಿಂದ ಬಿಜೆಪಿ ಕಣಕ್ಕಿಳಿಸಿದೆ. ಮಾಜಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಅವರಿಗೆ ಪಾಟ್ನಾ ಸಾಹಿಬ್, ರಾಜೀವ್ ಪ್ರತಾಪ್ ರೂಡಿ ಅವರಿಗೆ ಸರಣ್, ರಾಧಾ ಮೋಹನ್ ಸಿಂಗ್ ಅವರಿಗೆ ಪೂರ್ವಿ ಚಂಪಾರಣ್ ಮತ್ತು ರಾಮ್ ಕೃಪಾಲ್ ಯಾದವ್ ಅವರಿಗೆ ಪಾಟಲಿಪುತ್ರದ ಟಿಕೆಟ್ ನೀಡಿದೆ.
ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ :
ಕರ್ನಾಟದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿತ್ತು. ಭಾನುವಾರ ಬೆಳಗಾವಿ, ಚಿಕ್ಕಬಳ್ಳಾಪುರ, ರಾಯಚೂರು ಮತ್ತು ಉತ್ತರ ಕನ್ನಡ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇನ್ನು ಒಂದು ಕ್ಷೇತ್ರ ಚಿತ್ರದುರ್ಗಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಬೇಕಿದೆ. ಉಳಿದ ಮೂರು ಕ್ಷೇತ್ರಗಳಾದ ಹಾಸನ, ಮಂಡ್ಯ, ಕೋಲಾರವನ್ನು ಮೈತ್ರಿ ಪಕ್ಷ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ.
ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಿದ್ದು, ಇಲ್ಲಿನ ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪಿದೆ. ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಲಾಗಿದೆ. ಚಿಕ್ಕಬಳ್ಳಾಪುರದ ಟಿಕೆಟ್ ಮಾಜಿ ಸಚಿವ ಡಾ.ಕೆ ಸುಧಾಕರ್‌ಗೆ ನೀಡಲಾಗಿದೆ. ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕರ ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ : ‘ಪ್ರಚಾರಕ್ಕೆ ಅಡ್ಡಿಪಡಿಸಲು ಸಿಬಿಐ ನನಗೆ ಕಿರುಕುಳ ನೀಡುತ್ತಿದೆ..’; ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಹುವಾ


