ಕಚ್ಚತೀವು ದ್ವೀಪದ ವಿಚಾರದಲ್ಲಿ ಭಾರತವು ಇನ್ನೂ ಯಾವುದೇ ಅಧಿಕೃತ ಸಂವಹನವನ್ನು ನಡೆಸಿಲ್ಲ ಎಂದು ಶ್ರೀಲಂಕಾದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿ ಕಚ್ಚತೀವು ದ್ವೀಪದ ವಿಚಾರವನ್ನು ಬಿಜೆಪಿ ಮತ್ತು ಪ್ರಧಾನಿ ಮೋದಿ ಮುನ್ನೆಲೆಗೆ ತಂದಿದ್ದರು. ಕಾಂಗ್ರೆಸ್ ಮತ್ತು ಡಿಎಂಕೆ ದ್ವೀಪವನ್ನು ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದರು. ಪಕ್ಷದ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ದ್ವೀಪವನ್ನು ಮರಳಿ ಪಡೆಯಲು ಕೇಂದ್ರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದರು.
ಶ್ರೀಲಂಕಾಕ್ಕೆ ಸಂಬಂಧಿಸಿದಂತೆ, ಕಚ್ಚತೀವು ದ್ವೀಪವು ಶ್ರೀಲಂಕಾದ ನಿಯಂತ್ರಣ ರೇಖೆಯೊಳಗೆ ಬರುತ್ತದೆ. ಶ್ರೀಲಂಕಾದೊಂದಿಗೆ ಭಾರತದ ಸಂಬಂಧ ಉತ್ತಮವಾಗಿದೆ. ಇಲ್ಲಿಯವರೆಗೆ ಕಚ್ಚತೀವು ದ್ವೀಪದ ಅಧಿಕಾರವನ್ನು ಹಿಂದಿರುಗಿಸುವ ಬಗ್ಗೆ ಭಾರತದಿಂದ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಭಾರತದಿಂದ ಇದುವರೆಗೆ ಅಂತಹ ಮನವಿ ಬಂದಿಲ್ಲ. ಅಂತಹ ಯಾವುದೇ ಪ್ರಸ್ತಾವನೆ ಮುನ್ನೆಲೆ ಬಂದರೆ ವಿದೇಶಾಂಗ ಸಚಿವಾಲಯವು ಅದಕ್ಕೆ ಉತ್ತರಿಸಲಿದೆ ಎಂದು ಶ್ರೀಲಂಕಾದ ಸಚಿವ ಜೀವನ್ ಥೋಂಡಮನ್ ಹೇಳಿದ್ದಾರೆ.
1974ರಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು ಮತ್ತು ಅದನ್ನು ಮುಚ್ಚಿಟ್ಟಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಿಜೆಪಿ ಹೇಳಿಕೆ ನೀಡಿದ ಬೆನ್ನಲ್ಲಿ ಹೇಳಿದ್ದರು. ಅಣ್ಣಾಮಲೈ ಅವರು ಕೇಂದ್ರ ಸರ್ಕಾರ ದ್ವೀಪವನ್ನು ಮರಳಿ ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದರು.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್ ಅವರು ದ್ವೀಪವನ್ನು ಮರಳಿ ಪಡೆಯಲು ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗೆ, ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ. ಇದು ಉಪ ನ್ಯಾಯಾಂಗದ ವಿಷಯ ಎಂದು ಹೇಳಿದ್ದರು.
ನಂತರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಪರಿಗಣಿಸಲಾಗುವುದು. ಈ ವಿಷಯದಲ್ಲಿ ಬಿಜೆಪಿಯ ಏಕೈಕ ಗುರಿ ತಮಿಳು ಮೀನುಗಾರರ ಸುರಕ್ಷತೆ. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜೈಶಂಕರ್ ಗಂಭೀರವಾಗಿ ವರ್ತಿಸಿದ್ದಾರೆ. ಕಚ್ಚತೀವು ಅಕ್ರಮವಾಗಿ ಶ್ರೀಲಂಕಾಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದರು.
ಭಾರತದ ಜೊತೆ ಈ ಬಗ್ಗೆ ಯಾವುದೇ ಸಂವಹನ ನಡೆದಿಲ್ಲ ಎಂದು ತೊಂಡಮಾನ್ ನಿರಾಕರಿಸಿದ್ದಾರೆ, ಹೆಸರು ಹೇಳಲು ಇಚ್ಛಿಸದ ಶ್ರೀಲಂಕಾದ ಮತ್ತೊಬ್ಬ ಸಚಿವರು, ಹೊಸ ಸರ್ಕಾರದ ಇಚ್ಛೆ ವ್ಯಕ್ತಪಡಿಸಿದಂತೆ ರಾಷ್ಟ್ರೀಯ ಗಡಿಗಳನ್ನು ಬದಲಾಯಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕಚ್ಚತೀವು ಶ್ರೀಲಂಕಾದ ನಿಯಂತ್ರಣ ರೇಖೆಯೊಳಗೆ ಔಪಚಾರಿಕವಾಗಿ ಗುರುತಿಸಲ್ಪಟ್ಟಿದೆ. ಗಡಿಯನ್ನು ನಿರ್ಧರಿಸಿದ ನಂತರ ಸರ್ಕಾರದಲ್ಲಿ ಬದಲಾವಣೆಯಾದ ಕಾರಣಕ್ಕಾಗಿ ಯಾರೂ ದ್ವೀಪದ ಬದಲಾವಣೆಗೆ ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಕಚ್ಚ ತೀವು ಶ್ರೀಲಂಕಾ ಕ್ಯಾಬಿನೆಟ್‌ನಲ್ಲಿ ಚರ್ಚೆಯ ವಿಷಯವಾಗಿರಲಿಲ್ಲ. ಈ ಬಗ್ಗೆ ಭಾರತದಿಂದ ಯಾವುದೇ ಸಂವಹನ ನಡೆದಿಲ್ಲ ಎಂದು ಹೇಳಿದ್ದಾರೆ.
ಕಚ್ಚತೀವು ದ್ವೀಪವು ಶ್ರೀಲಂಕಾ ಮತ್ತು ತಮಿಳುನಾಡಿನ ರಾಮೇಶ್ವರಂ ನಡುವೆ ಇದೆ. 1974ರಲ್ಲಿ, ಇಂದಿರಾ ಗಾಂಧಿ ಸರ್ಕಾರವು ಶ್ರೀಲಂಕಾಗೆ ದ್ವೀಪವನ್ನು ಬಿಟ್ಟುಕೊಡಲು ಅವಕಾಶ ಮಾಡಿಕೊಟ್ಟಿತು. ಕಳೆದ 50 ವರ್ಷಗಳಲ್ಲಿ ಮೀನುಗಾರರನ್ನು ಬಂಧಿಸಿರುವುದು ನಿಜ. ಅಂತೆಯೇ, ಭಾರತವು ಅನೇಕ ಶ್ರೀಲಂಕಾ ಮೀನುಗಾರರನ್ನು ಬಂಧಿಸಿದೆ. ಪ್ರತಿಯೊಂದು ಸರ್ಕಾರವು ಶ್ರೀಲಂಕಾದೊಂದಿಗೆ ಮಾತುಕತೆ ನಡೆಸಿ ನಮ್ಮ ಮೀನುಗಾರರನ್ನು ಬಿಡುಗಡೆ ಮಾಡಿದೆ. ಜೈಶಂಕರ್ ಅವರು ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದಾಗ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ, ವಿದೇಶಾಂಗ ಸಚಿವರಾಗಿದ್ದಾಗ ಇದು ಸಂಭವಿಸಿದೆ. ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಲು ಜೈಶಂಕರ್‌ಗೆ ಏನು ಬದಲಾವಣೆಯಾಗಿದೆ? ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಾಗ ಮೀನುಗಾರರನ್ನು ಶ್ರೀಲಂಕಾ ಬಂಧಿಸಲಿಲ್ಲವೇ? 2014ರಿಂದ ಮೋದಿ ಅಧಿಕಾರದಲ್ಲಿದ್ದಾಗ ಶ್ರೀಲಂಕಾ ಮೀನುಗಾರರನ್ನು ಬಂಧಿಸಲಿಲ್ಲವೇ ಎಂದು ಚಿದಂಬರಂ ಪ್ರಶ್ನಿಸಿದ್ದರು.
ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರು ಸೋಮವಾರ ಕಚ್ಚತೀವು ದ್ವೀಪದ ವಿವಾದದ ಕುರಿತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಿಳುನಾಡಿನ ಬಗ್ಗೆ ಅಷ್ಟು ಕಾಳಜಿ ಇದ್ದರೆ, ಶ್ರೀಲಂಕಾದಿಂದ ದ್ವೀಪವನ್ನು ಹಿಂದಕ್ಕೆ ತೆಗೆದುಕೊಳ್ಳುವ ಧೈರ್ಯ ಮಾಡುತ್ತಾರೆಯೇ ಎಂದು ಸವಾಲು ಹಾಕಿದ್ದರು. ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ಐತಿಹಾಸಿಕ ಸಂದರ್ಭವನ್ನು ವಿವರಿಸಿದ ಟ್ಯಾಗೋರ್, ಆ ಸಮಯದಲ್ಲಿ 6 ಲಕ್ಷ ತಮಿಳರನ್ನು ಉಳಿಸಲು ಇಂದಿರಾ ಗಾಂಧಿ ನೇತೃತ್ವದ ಭಾರತ ಸರ್ಕಾರವು ‘ಇಂದಿರಾ ಗಾಂಧಿ-ಸಿರಿಮಾವೋ ಬಂಡಾರನಾಯಕೆ’ ಎಂಬ ಒಪ್ಪಂದಕ್ಕೆ ಸಹಿ ಹಾಕಿತು. ಅವರು ಹಳೆಯ ರಾಮನಾಡ್ ಜಿಲ್ಲೆಯ ಮೂಲನಿವಾಸಿಗಳಾಗಿರುವುದರಿಂದ, ಈ ಕಚ್ಚತೀವು ದ್ವೀಪವನ್ನು ಭಾರತ ಸರ್ಕಾರವು ಶ್ರೀಲಂಕಾ ಸರ್ಕಾರಕ್ಕೆ ನೀಡಿದೆ; ಇದನ್ನು ತಮಿಳರನ್ನು ಉಳಿಸಲು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಇದನ್ನು ಓದಿ: ಬಿಜೆಪಿ ಸೇರ್ಪಡೆಗೊಳ್ಳಿ ಅಥವಾ ಬಂಧನಕ್ಕೆ ಸಿದ್ಧರಾಗಿ: ದೆಹಲಿ ಸಚಿವೆ ಅತಿಶಿಗೆ ಬೆದರಿಕೆ!


