“ನನ್ನದಲ್ಲದ ಸ್ಥಳದ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಾನೇಕೆ ಮತ ಹಾಕಬೇಕು? ಚುನಾವಣೆ ಎಂದರೆ ನಮಗೆ ಏನೂ ಅಲ್ಲ” ಇದು ಕಳೆದ 11 ತಿಂಗಳ ಹಿಂದೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ನೋಬಿ ಎಂಬ ಮಹಿಳೆಯ ಮಾತು.
ಇದು 42 ವರ್ಷದ ನೋಬಿ ಒಬ್ಬರ ಹೇಳಿಕೆಯಲ್ಲ. ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಸಂಘರ್ಷದಿಂದ ಮನೆ ಕಳೆದುಕೊಂಡು ಪ್ರಸ್ತುತ ಶಿಬಿರಗಳಲ್ಲಿ ವಾಸಿಸುತ್ತಿರುವ ಹಲವರು “ನಮಗೆ ಮತದಾನದ ಹಕ್ಕಿಗಿಂತ ಮೊದಲು ಬದುಕುವ ಹಕ್ಕು ಬೇಕು” ಎಂದು ಹೇಳುತ್ತಿದ್ದಾರೆ.
2019ರ ಚುನಾವಣೆಯಲ್ಲಿ ಶೇಕಡಾ 82ಕ್ಕಿಂತ ಹೆಚ್ಚು ಮತದಾನದ ಮೂಲಕ ರಾಜ್ಯವು ಅತೀ ಹೆಚ್ಚು ಮತದಾನದ ಹೆಗ್ಗಳಿಕೆ ಪಡೆದಿತ್ತು. ಆದರೆ, ಕಳೆದ ವರ್ಷದ ನಡೆದ ಜನಾಂಗೀಯ ಸಂಘರ್ಷ ಈ ಬಾರಿಯ ಮತದಾನದ ಮೇಲೆ ಕರಿ ನೆರಳು ಬೀರಿದ್ದು, ಹಿಂಸಾಚಾರದಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ ಜನರು ಈಗ ಚುನಾವಣೆಯ ಅಗತ್ಯವೇನಿದೆ ಎಂದು ಕೇಳುತ್ತಿದ್ದಾರೆ.
“ಗೌರವದಿಂದ ಬದುಕುವ ನನ್ನ ಹಕ್ಕನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ನನ್ನ ಮತದಾನದ ಹಕ್ಕನ್ನು ಖಚಿತಪಡಿಸಲು ಹೊರಟಿದ್ದಾರೆಯೇ?” ಎಂದು ನೋಬಿ ಪ್ರಶ್ನಿಸಿದ್ದಾರೆ.
“ನನ್ನ ಕಣ್ಣೆದುರೇ ನನ್ನ ಮನೆ ಸುಟ್ಟು ಹೋಯಿತು. ನಾನು ಮತ್ತು ನನ್ನ ಕುಟುಂಬದವರು ರಾತ್ರೋ ರಾತ್ರಿ ಮನೆ ಬಿಟ್ಟು ಹೊರಟೆವು. ಅಲ್ಲಿ ಈಗ ಏನು ಉಳಿದಿದೆ ಎಂದು ನಮಗೆ ಗೊತ್ತಿಲ್ಲ. ಇನ್ನು ಮುಂದೆ ಆ ಸ್ಥಳ ನನ್ನದಲ್ಲ. ಹೀಗಿರುವಾಗ ನನ್ನದಲ್ಲದ ಸ್ಥಳದ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಾನೇಕೆ ಮತ ಮತ ಹಾಕಬೇಕು? ಇದೆಲ್ಲವೂ ಗಿಮಿಕ್… ಚುನಾವಣೆ ಎಂದರೆ ನಮಗೆ ಏನೂ ಎಂದೇ ಅರ್ಥವಾಗುತ್ತಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ಜೊತೆ ನೋಬಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಣಿಪುರದಲ್ಲಿ ಕಳೆದ ವರ್ಷದ ಮೇ 3ರಂದು ಪ್ರಾರಂಭಗೊಂಡ ಕುಕೀಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷ 200 ಜನರನ್ನು ಬಲಿ ಪಡೆದಿದೆ. ಪ್ರಸ್ತುತ ಮೈತೇಯಿ ಸಮುದಾಯದವರು ಇಂಫಾಲ್ ನಗರದಲ್ಲಿ ಕೇಂದ್ರೀಕೃತವಾಗಿದ್ದರೆ, ಕುಕಿಗಳು ಬೆಟ್ಟ ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಮಣಿಪುರ ಎಂಬ ರಾಜ್ಯವು ಎರಡು ಹೋಳಾದಂತಾಗಿದೆ.
ಮಣಿಪುರದ ಎರಡು ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರದ ಕೆಲವು ಭಾಗಗಳಲ್ಲಿ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಔಟರ್ ಮಣಿಪುರದ ಉಳಿದ ಭಾಗಗಳಲ್ಲಿ ಏಪ್ರಿಲ್ 2 ಮತ್ತು 26 ರಂದು ಹಂತ ಹಂತವಾಗಿ ಮತದಾನ ನಡೆಯಲಿವೆ.
ಅಧಿಕಾರಿಗಳ ಪ್ರಕಾರ, ಹಿಂಸಾಚಾರದ ನಂತರ 50,000 ಕ್ಕೂ ಹೆಚ್ಚು ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯನ್ನೇ ಅವರು ಪ್ರಶ್ನಿಸಿದ್ದು, ಇದೊಂದು ಗಿಮಿಕ್ ಮಾತ್ರವಲ್ಲದೆ, ನಮ್ಮ ನಿಜವಾದ ಸಮಸ್ಯೆಗಳು ಪರಿಹಾರಗೊಳ್ಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಸೇರಿದಂತೆ ಹಲವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಕಾಂಗ್ರೆಸ್


