ಚಳ್ಳಕೆರೆಯ ವಿಠ್ಠಲನಗರದಲ್ಲಿ ಇಸ್ತ್ರಿ ಮಾಡುವ ಪೆಟ್ಟಿಗೆ ಅಂಗಡಿಯಲ್ಲೇ ಪುಸ್ತಕಗಳನ್ನು ನೀಟಾಗಿ ಒತ್ತರಿಸಿಟ್ಟು ಓದುಬರಹ ಮಾಡುವ ಜನಪದ ಕವಿ ಪಗಡಲಬಂಡೆ ಹೆಚ್. ನಾಗೇಂದ್ರಪ್ಪ. ಆಶುಕವಿ, ಸ್ವರಚಿತ ಕವಿತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ ಸಣ್ಣಾಟ ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು.

ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕವಿಗಳ ಜತೆ ಹೋಲಿಸಲಾಗದು. ಅವರ ಕವಿತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ. ಬದಲಾಗಿ ತನ್ನ ಸುತ್ತಮುತ್ತಣ ಯಕಶ್ಚಿತ್ ಎನ್ನುವಂತಹ ಸಂಗತಿಗಳನ್ನು ಆಯ್ದು ಅವುಗಳನ್ನು ಜನÀಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವದಂತಹ ಭಾವನೆಗಳ ಜತೆ ಕಟ್ಟಿದ್ದಾರೆ. ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ. ಈ ಕಾರಣಕ್ಕೆ ಕವಿ ಬೇಂದ್ರೆ ನನಗೆ ಇಷ್ಟ ಎನ್ನುತ್ತಾರೆ.
ಚಳ್ಳಕೆರೆ ಭಾಗ ಕರ್ನಾಟಕದಲ್ಲಿಯೇ ಅತಿ ಕಡಿಮೆ ಮಳೆಬೀಳುವ ಪ್ರದೇಶ. ಹಾಗಾಗಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು ಹೆಚ್ಚಾಗಿ ಕೈಸುಟ್ಟುಕೊಳ್ಳುವುದೇ ಹೆಚ್ಚು. ಈ ಸಂಗತಿಯು ಕವಿಯನ್ನು ಬಹುವಾಗಿ ಕಾಡಿದೆ. ಈ ಕವಿತೆಗಳಲ್ಲಿ ರೈತ ಹೊಲ ಮಳೆ ಮೋಡ ಕುರಿತ ರೂಪಕಗಳು ಮತ್ತೆ ಮತ್ತೆ ಮರುಕಳಿಸಿವೆ. ಅಂತೆಯೇ ಮಳೆ ಕರೆಯುವ ಮೂರ್ನಾಲ್ಕು ಪದ್ಯಗಳಿವೆ. `ಮುನಿದೆ ಏಕೋ ಮಳೆರಾಯ’ ಎನ್ನುವ ಪದ್ಯದಲ್ಲಿ `ಉತ್ತಿದರು ಬಿತ್ತಿದರು ಕತ್ತೆತ್ತಿ ನೋಡಿ/ ಗೋಗರೆದರೂ ಕರಗಲಿಲ್ಲ/ ವರುಣ ದೇವನೆದೆ’ ಎನ್ನುತ್ತಾರೆ.
`ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕಾಯಕದಲಿ’ ಕವಿತೆ ಗಮನ ಸೆಳೆವ ಪದ್ಯ. ನಾಗೇಂದ್ರಪ್ಪ ಸ್ವತಃ ಮಡಿವಾಳ ಸಮುದಾಯಕ್ಕೆ ಸೇರಿದಾತ. ಜಗದ ಬಟ್ಟೆಗಳ ಮಡಿಮಾಡಿಕೊಡುವ ಕುಲಕಸಬನ್ನು ಮಾಡಿದಾತ. ಈಗಲೂ ಇಸ್ತ್ರಿ ಅಂಗಡಿಯಲ್ಲಿ ಲೋಕದ ಬಟ್ಟೆಗಳ ಗರಿಗರಿಯಾಗಿಸುವಾತ. ಇಂತಹ ಸಮುದಾಯದ ಅನುಭವಗಳನ್ನು ನಾಗೇಂದ್ರಪ್ಪ ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. `ಇದ್ದಿಲು ನಿಗಿನಿಗಿ ಹೊಳೆದು/ಹೊಟ್ಟೆ ಬಟ್ಟೆ ತೊಡಿಸಿ/ಸ್ಫೂರ್ತಿ ನೀಡಿತು/ಬೂದಿಮುಚ್ಚಿದ ಕೆಂಡವಿದ್ದು/ ಬದುಕಿನ ನೆರವಿನ ತಂಗಾಳಿ ಬೀಸಿದಾಗ ಮತ್ತೆ ಪ್ರಜ್ವಲಿಸಿತು/ ಅಗುಳಿನ ಗಳಿಗೆಯ ಚೀಲ ತುಂಬಿ ನಿದ್ರಿಸಿತು’ ಎನ್ನುತ್ತಾರೆ. ಅಂತೆಯೇ ಉಳ್ಳವರ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಕವಿ ಸಿರಿವಂತಿಕೆಯ ಮೇಲಿನ ಸಿಟ್ಟನ್ನು ತನ್ನ ಕಾಯಕದಲ್ಲಿ ದಾಟಿಸಿ ಹಗುರಾಗುವಂತಿದೆ. ಹಾಗಾಗಿಯೇ `ಜುಬ್ಬದ ದಿಬ್ಬ ನಿದ್ದೆಯ ಕೆಡಿಸಿ/ಸೊಕ್ಕಿದ ಸುಕ್ಕು ಕೊಬ್ಬನು ಕರಗಿಸಿ/ ಹಾಸಿಗೆ ಹಿಡಿಸಿತು/ ಆಶ್ರಯ ತಪ್ಪಿದ ಪ್ರತಿಭೆ/ತರಗೆಲೆಯಾಗಿ/ಕಮರಿ ಧೂಳಾಯಿತು’ ಎನ್ನುತ್ತಾರೆ. ಮುಂದುವರಿದು `ಲೋಕದ ಸುಕ್ಕುಗಳ/ಇಸ್ತ್ರಿ ಮಾಡುವ ಕಾಯಕದಲಿ/ ನಾನು ನನ್ನವರು/ ಸುಟ್ಟುಕೊಳ್ಳುತ್ತಲೇ/ ಗಟ್ಟಿಯಾಗುತ್ತಿದ್ದೇವೆ/ ಬದುಕೆಂಬ ಇಟ್ಟಿಗೆ ಭಟ್ಟಿಯಲಿ’ ಎಂದು ಬದುಕಿಗೆ ಚೈತನ್ಯ ಪಡೆಯುತ್ತಾರೆ.

ನಾಗೇಂದ್ರಪ್ಪ ಜನಪದ ಕವಿಯಾಗಿಯೂ ಆಧುನಿಕ ವೈಚಾರಿಕತೆ ಇವರ ಕವಿತೆಗಳಲ್ಲಿ ಹೆಣೆದುಕೊಂಡಿದೆ. ಈ ಕಾರಣಕ್ಕೆ ಇಲ್ಲಿ ಜನರ ಕಷ್ಟನಷ್ಟಗಳನ್ನು ಕವಿತೆಯನ್ನಾಗಿಸುತ್ತಲೇ ಇವುಗಳಿಂದ ಹೊರಬರಬಹುದಾದ ದಾರಿಗಳ ಬಗ್ಗೆಯೂ ಜಾಗೃತರಾಗಿದ್ದಾರೆ. ಈ ಸಂಕಲನದ `ಕ್ರಾಂತಿಗೀತೆ’ ಎನ್ನುವ ಕವಿತೆ ಗಮನ ಸೆಳೆಯುವಂತಿದೆ. `ನೆಲ ಅಗೆದರು ಮರ ಕಡಿದರು/ ಅದಿರು ತೆಗೆದರು ಮರಳು ಮಾರಿದರು/ಕನ್ನಡಮ್ಮನ ಬಂಜೆ ಮಾಡಿದರು/ಖಜಾನೆ ಲೂಟಿ ಹೊಡೆದರು’ ಎಂದು ವಾಸ್ತವದ ಕನ್ನಡಮ್ಮನ ನೆನೆಯುತ್ತಾರೆ. ಅಂತೆಯೇ `ಕ್ರಾಂತಿ ಕಹಳೆ ಮೊಳಗಲಿ/ಶಾಂತಿ ಬೀಡು ಆಗಲಿ/ಏಳಿರಿ ಸಿಡಿದೇಳಿರಿ’ ಎಂದು ಕರೆಕೊಡುತ್ತಾರೆ. ಇಷ್ಟರಮಟ್ಟಿಗೆ ಕವಿ ವರ್ತಮಾನವನ್ನು ಎಚ್ಚರದ ಕಣ್ಣಿಂದ ಗಮನಿಸಿದ್ದಾರೆ.
ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು ಎನ್ನುವುದು ಗಮನ ಸೆಳೆಯುತ್ತದೆ. ಹಾಗಾಗಿ ಇಲ್ಲಿ ಕವಿತೆಗಳನ್ನು ಕಟ್ಟುವಲ್ಲಿ ವಾಚ್ಯವಾದರೂ ಈ ಕವಿಗೆ ಕವಿತೆಯಲ್ಲಿ ತಾನು ಹೇಳಬೇಕಿರುವುದು ಏನನ್ನು ಮತ್ತು ಯಾರ ಧ್ವನಿಯನ್ನು ಎನ್ನುವ ಸ್ಪಷ್ಟತೆ ಇದೆ. ಹಾಗಾಗಿಯೇ ನೇಪಾಳದ ಭೂಕಂಪಕ್ಕೆ ಕಣ್ಣೀರಾಗುತ್ತಾರೆ. ರೈತರ ಬವಣೆಗೆ ಕರಗುತ್ತಾರೆ. ನಾಗೇಂದ್ರಪ್ಪ ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ. ಆ ಸಂದರ್ಭಗಳಲ್ಲಿ ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸಿ, ಕವಿತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಜೀವಪರವಾಗಿ ತುಡಿಯುವ ಕವಿ ಇನ್ನಷ್ಟು ಗಟ್ಟಿಯಾಗಿ ಕವಿತೆಗಳನ್ನು ಕಟ್ಟಲಿ ಎಂದು ಆಶಿಸುವೆ..


