ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾನಹಾನಿ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು ಸೂರತ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮಾನಹಾನಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾದರು.
ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ವಿರುದ್ಧ ವಾಕ್ಪ್ರಹಾರ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಮೋದಿ ಉಪನಾಮ ಹೊಂದಿದವರೆಲ್ಲರೂ ಕಳ್ಳರು” ಎಂದು ಅಪಹಾಸ್ಯ ಮಾಡಿದ್ದರು. ಇದನ್ನು ಪ್ರಶ್ನಿಸಿ ಸೂರತ್ ನ ಸ್ಥಳೀಯ ಬಿಜೆಪಿ ಶಾಸಕ ಪೂರ್ಣೇಶ್ ಮಾನಹಾನಿ ಮೊಕದ್ದಮೆ ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 499, 500 ಅಡಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಇಂದು ರಾಹುಲ್ ಗಾಂಧಿ ಸೂರತ್ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಕೇಸ್ ವಿಚಾರಣೆ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಾನಿಂದು ಸೂರತ್ ನಲ್ಲಿದ್ದೇನೆ. ನನ್ನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ರಾಜಕೀಯ ವಿರೋಧಿಗಳು ನನ್ನ ಬಾಯಿ ಮುಚ್ಚಿಸಲು ಹೊರಟಿದ್ದಾರೆ.
ನನ್ನೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಇಲ್ಲಿ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಸತ್ಯಕ್ಕೆ ಜಯವಾಗಲಿದೆ ಎಂದು ಬರೆದಿದ್ದಾರೆ.
I am in Surat today to appear in a defamation case filed against me by my political opponents, desperate to silence me.
I am grateful for the love & support of the Congress workers who have gathered here to express their solidarity with me. #SatyamevJayate pic.twitter.com/HZmAcEhciu
— Rahul Gandhi (@RahulGandhi) October 10, 2019
ಕರ್ನಾಟಕದ ಕೋಲಾರದಲ್ಲಿ ಏಪ್ರಿಲ್‌ನಲ್ಲಿ ನಡೆದಿದ್ದ ಚುನಾವಣಾ ರ್‍ಯಾಲಿ ವೇಳೆ ರಾಹುಲ್ ಗಾಂಧಿ, ಭಾರತೀಯ ಬ್ಯಾಂಕುಗಳಿಗೆ ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಅವರ ಹೆಸರುಗಳನ್ನು ಭಾಷಣದಲ್ಲಿ ಉಲ್ಲೇಖಿಸಿದ್ದರು. ಜತೆಗೆ “ಈ ಮೋದಿ ಉಪನಾಮ ಹೊಂದಿದವರೆಲ್ಲರೂ ಕಳ್ಳರು” ಎಂದಿದ್ದರು. ರಫೇಲ್ ವ್ಯವಹಾರದಲ್ಲಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ಮಾಡಿದ್ದಾರೆ ಎಂದೂ ಅವರು ಆರೋಪಿಸಿದ್ದರು.
ರಾಹುಲ್ ಆಡಿದ ಮಾತು ಮೋದಿ ಬಳಗಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಬಿಜೆಪಿ ಶಾಸಕ ಪೂರ್ಣೇಶ್ ಮೊಕದ್ದಮೆ ಸಲ್ಲಿಸಿದ್ದರು. ದೂರು ಸ್ವೀಕರಿಸಿದ್ದ ಸೂರತ್ ಮ್ಯಾಜಿಸ್ಟ್ರೇಟ್ ಬಿ.ಎಚ್,ಕಪಾಡಿಯಾ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದರು. ನಂತರ ನ್ಯಾಯಾಲಯಕ್ಕೆ ಹಾಜರಾಗಲು ಕಾಲಾವಕಾಶ ಕೋರಿ, ರಾಹುಲ್ ಪರ ವಕೀಲರು ಮನವಿ ಸಲ್ಲಿಸಿದ್ದರು. ಮನವಿಗೆ ಸಮ್ಮತಿ ಸೂಚಿಸಿದ್ದ ಕೋರ್ಟ್, ಇಂದಿಗೆ ವಿಚಾರಣೆ ಮುಂದೂಡಿ, ರಾಹುಲ್ ಖುದ್ದು ಹಾಜರಾಗಬೇಕೆಂದು ಆದೇಶಿಸಿತ್ತು.
ಇನ್ನು ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಅಹಮದಾಬಾದ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಪ್ರಕರಣ ಕೂಡ ವಿಚಾರಣೆ ಹಂತದಲ್ಲಿದೆ. ಅಮಿತ್ ಶಾ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿದ್ದಾಗ, ನೋಟು ಅಮಾನ್ಯೀಕರಣದ ವೇಳೆ 750 ಕೋಟಿ ಹಳೆಯ ನೋಟುಗಳನ್ನು ಬದಲಿಸಿ ಹಗರಣ ಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದರು.


