ತೆಲಂಗಾಣ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಹತ್ವದ ಹೇಳಿಕೆಯನ್ನು ನೀಡಿದ್ದು, ಆಗಸ್ಟ್ 15ರೊಳಗೆ 2 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರದ ಅಂಗವಾಗಿ ಸೋಮವಾರ ಸಂಜೆ ನಾರಾಯಣಪೇಟೆಯಲ್ಲಿ ನಡೆದ ಕಾಂಗ್ರೆಸ್ ‘ಜನ ಜಾತ್ರೆ ಸಭಾ’ದಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಆಗಸ್ಟ್ 15 ರೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ ರೇವಂತ್ ರೆಡ್ಡಿ, ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆಯಿಂದಾಗಿ ಇಲ್ಲಿಯವರೆಗೆ ಸಾಲ ಮನ್ನಾ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಬೆಳೆ ಹಂಗಾಮಿನಿಂದ ರೈತರಿಗೆ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂಪಾಯಿ ಬೋನಸ್ ನೀಡಲಿದೆ ಎಂದು ರೇವಂತ್ ರೆಡ್ಡಿ ರೈತರಿಗೆ ಭರವಸೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಎರಡು ತಿಂಗಳೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ, ಸರ್ಕಾರದ ಯೋಜನೆಗಳನ್ನು ‘ಇಂದಿರಮ್ಮ’ ಸಮಿತಿಗಳ ಮೂಲಕ ಜಾರಿಗೊಳಿಸಲಾಗುವುದು, ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಮಿತಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿರುವ 17 ಲೋಕಸಭಾ ಸ್ಥಾನಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಲು ಬಿಜೆಪಿಯೊಂದಿಗೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜೈಲಿನಲ್ಲಿರುವ ಮಗಳು ಕೆ.ಕವಿತಾಗೆ ಜಾಮೀನು ಪಡೆಯಲು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಡಮಾನವಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ 15 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರೆ ರಾಜ್ಯ ಸಚಿವ ಸಂಪುಟದಲ್ಲಿ ಮುದಿರಾಜ್ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದಲ್ಲದೆ ರಾಜ್ಯದ ಜನಸಂಖ್ಯೆಯ ಶೇ.10ರಷ್ಟಿರುವ ಮುದಿರಾಜ್ ಸಮುದಾಯಕ್ಕೆ ಕೆಸಿಆರ್ ಅವರು ಒಂದೇ ಒಂದು ಟಿಕೆಟ್ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿ.ಆರ್.ಎಸ್ ಸರ್ಕಾರ 10 ವರ್ಷಗಳಿಂದ ಮುದಿರಾಜ್ ಸಮುದಾಯಕ್ಕೆ ಏನೂ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ


