ಬಿಜೆಪಿಯ ‘ಮೋದಿ ಗ್ಯಾರಂಟಿ’ ಘೋಷಣೆ ಕುರಿತು ಆಕ್ರೋಶ ಹೊರಹಾಕಿರುವ ಬಹುಭಾಷಾ ನಟ ಕಿಶೋರ್ ಕುಮಾರ್, ‘ನಮ್ಮ ಹೆಣಗಳ ಮೇಲೆ ಇವರ ಹಣದ ರಾಜ್ಯ ಇದೇ ಇವರ ಸಂವೇದನಾ ಹೀನತೆಯ ಗ್ಯಾರಂಟಿ’ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕೋವಿಡ್ ಸಂದರ್ಭದ ಮೋದಿ ಸರ್ಕಾರದ ರಾಢಳಿತವನ್ನು ಟೀಕೆ ಮಾಡಿದ್ದಾರೆ.
“ಯಾರು ಸತ್ತರೆ ನನಗೇನು, ಅವರೇನು ನನಗಾಗಿ ಸತ್ತರೇ? ಎಂದು ಹೇಳುತ್ತಾ ಕೊರೋನಾದಿಂದ ಲಕ್ಷಾಂತರ ಜನ ಪ್ರಾಣಬಿಡುತ್ತಿದ್ದ ಕಾಲದಲ್ಲೂ ಔಷದಿ ಕಂಪನಿಗಳಿಂದ ಎಲೆಕ್ಟೊರಲ್ ಬಾಂಡ್ ಲೂಟಿ ಮಾಡಿದ, ಲಂಚ ತಿಂದು ಕಳಪೆ ಔಷದಿಯನ್ನು ಮಾರುಕಟ್ಟೆಗೆ ತಂದು ನಮ್ಮ ಜೀವದೊಂದಿಗೆ ಆಟವಾಡಿದ, ಅಮಾನವೀಯತೆಯ ನೀಚತೆಯ ಉತ್ತುಂಗ ತಲುಪಿದ ಪರಮ ಭ್ರಷ್ಠರು ಇನ್ನೂ ರಾಜಾರೋಷವಾಗಿ ತಿರುಗುತ್ತಿರುವುದು ಹೇಗೆ” ಅವರು ಪ್ರಶ್ನಿಸಿದ್ದಾರೆ.
“ಅದರಲ್ಲೂ ಸಾಕ್ಷ್ಯಾಧಾರ ಸಮೇತ ಸಿಕ್ಕಿಹಾಕಿಕೊಂಡರೂ ನಾಚಿಕೆ, ನ್ಯಾಯ ಯಾವುದರ ಪರಿವೆಯೂ ಇಲ್ಲದೆ ಈ ಅಸಂವಿಧಾನಿಕ ದರೋಡೆಯ ಅಪರಾಧವನ್ನು ತಾನೇ ಮಾಡಿದ್ದೆಂದೂ; ಅದು ಸರಿಯೆಂದೂ, ಆ ದರೋಡೆ ಗುಂಪಿನ ಪ್ರಮುಖ ಮೋದಿಯೇ ಬಹಿರಂಗವಾಗಿ ಸಮರ್ಥಿಸಿಕೊಳ್ಳಲು ಧೈರ್ಯ ಕೊಟ್ಟವರು ಯಾರು” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
“ಇವರು ರಾಜಕೀಯ ದಾಳವಾಗಿ ಬಳಸುವ ಧರ್ಮವೇ?? (ಹಾಗಿದ್ದರೆ ಆ ಧರ್ಮದ ರಕ್ಷಣೆಯಲ್ಲಿ ಇವರು ನಡೆಸಿದ ಈ ಹೇಯ ಕೃತ್ಯ ಆ ಧರ್ಮಕ್ಕೇ ಘೋರ ಅಪಮಾನವಲ್ಲವೇ) ಇವರ ಭ್ರಷ್ಟಾಚಾರದ ಸತ್ಯವನ್ನು ಜನರಿಗೆ ತಲುಪಿಸದೇ ಮುಚ್ಚಿಟ್ಟು, ಇವರು ಹೇಳುವ ಸುಳ್ಳನ್ನೇ ಹರಡುವ ಇವರ ಅಧಿಕಾರವನ್ನು ಕಾಪಾಡುವ ದೇಶದ್ರೊಹಿ ಮಾಧ್ಯಮವೇ? ಇಷ್ಟೆಲ್ಲಾ ಸಾಕ್ಷಿಯಿದ್ದೂ ಇವರನ್ನು ಬೆಂಬಲಿಸುವ ವಿವೇಚನೆ ಕಳೆದುಕೊಂಡ ಅಂಧಜನವೇ?
ಇವರ ಕೂಲಿ ಪಡೆಗೆ ಹೆದರಿ ಇವರನ್ನು ಪ್ರಶ್ನಿಸದ ನಾವೇ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ‘ಪ್ರತಿಪಕ್ಷಗಳಿಗೂ ದೇಣಿಗೆ ಸಿಕ್ಕಿದೆ, ಇದು ಸುಲಿಗೆಯೇ..?’; ಚುನಾವಣಾ ಬಾಂಡ್ ವ್ಯವಸ್ಥೆ ಸಮರ್ಥಿಸಿಕೊಂಡ ಅಮಿತ್ ಶಾ


