ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಹೆಚ್.ಡಿ ರೇವಣ್ಣ ನಿನ್ನೆ(ಮೇ 2) ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಇಂದಿಗೆ (ಮೇ 3) ಮುಂದೂಡಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರಾದ ರೇವಣ್ಣ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದಾರೆ ಎಂದು ವರದಿಯಾಗಿದೆ.
ಎಸ್‌ಐಟಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್ ಜಗದೀಶ್, ರೇವಣ್ಣ ಪ್ರಕರಣದಲ್ಲಿ ಸೆಕ್ಷನ್ 376 (ಅತ್ಯಾಚಾರ) ಸೇರ್ಪಡೆ ಮಾಡಿಲ್ಲ. ಅತ್ಯಾಚಾರ ಆರೋಪ ಇಲ್ಲದಿರುವ ಕಾರಣ ನಿರೀಕ್ಷಣಾ ಜಾಮೀನು ಕೋರಿಕೆಯ ಅರ್ಜಿ ವಿಚಾರಣೆ ಅಗತ್ಯವಿಲ್ಲ. ಆರೋಪಿ ವಿರುದ್ದ ಜಾಮೀನು ನೀಡಬಹುದಾದ ಆರೋಪಗಳು ಮಾತ್ರ ಇವೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿಕೆ ಹಿನ್ನೆಲೆ ರೇವಣ್ಣ ಪರ ವಕೀಲ ಮೂರ್ತಿ ಡಿ. ನಾಯಕ್ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಮೈಸೂರು: ಮಹಿಳೆ ನಾಪತ್ತೆ; ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲು


