ಗುಜರಾತ್‌ನ ದಾಹೋದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹಿಸಾಗರ್ ಜಿಲ್ಲೆಯಲ್ಲಿ ಮತಗಟ್ಟೆಗೆ ನುಗ್ಗಿ ನಕಲಿ ಮತದಾನ ಮಾಡಿದಲ್ಲದೆ, ತಮ್ಮ ಕೃತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ.
ಬಂಧಿತ ಇಬ್ಬರು ಬಿಜೆಪಿ ಸದಸ್ಯರಾಗಿದ್ದಾರೆ. ನೇರ ಪ್ರಸಾರದ ವಿಡಿಯೋ ವೈರಲ್ ಆಗಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ತಕ್ಷಣ ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರು.
ಆರೋಪಿಗಳಲ್ಲಿ ಒಬ್ಬನಾದ ವಿಜಯ್ ಭಭೋರ್ ಎಂಬಾತನ ಫೇಸ್‌ಬುಕ್ ಖಾತೆಯಿಂದ ನೇರ ಪ್ರಸಾರ ಮಾಡಲಾಗಿತ್ತು. ವಿಡಿಯೋದಲ್ಲಿ, ಭಭೋರ್ ಮಹಿಸಾಗರ್ ಜಿಲ್ಲೆಯ ಪ್ರಥಮಪುರದ ಮತಗಟ್ಟೆಯೊಂದಕ್ಕೆ ತೆರಳಿ ಇವಿಎಂ ಹಿಡಿದು ಎಳೆದಾಡಿರುವುದು ಮತ್ತು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದನ್ನು ನೋಡಬಹುದು. ಈ ಪ್ರದೇಶದಲ್ಲಿ ನನ್ನದೇ ಕಾರುಬಾರು ಎಂಬಂತೆ ಆರೋಪಿ ಇವಿಎಂ ಹಿಡಿದು ಡ್ಯಾನ್ಸ್ ಮಾಡಿದ್ದಾನೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ವೈರಲ್ ಆಗಿರುವ 10 ನಿಮಿಷದ ವಿಡಿಯೋದಲ್ಲಿ ಆರೋಪಿ ಭಭೋರ್ ಮತಗಟ್ಟೆಗೆ ತೆರಳಿ ” ನಮಗೆ 10 ನಿಮಿಷ ಕೊಡಿ. ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ. ಇದು ಈ ರೀತಿ ನಡೆಯಬಾರದು. ಬಿಜೆಪಿ ಮಾತ್ರ ನಡೆಸಬೇಕು. ಈ ಮತ ಯಂತ್ರ ನನ್ನ ಅಪ್ಪನಿಗೆ ಸೇರಿದ್ದು” ಎಂದು ಹೇಳಿದ್ದಾನೆ.
ಬಿಜೆಪಿ ಪರ ಮತ ಚಲಾಯಿಸುವಂತೆ ಆರೋಪಿ ಇತತರನ್ನು ಪ್ರೋತ್ಸಾಹಿಸಿದ್ದು ವಿಡಿಯೋದಲ್ಲಿ ಇದೆ ಎಂದು ವರದಿ ಹೇಳಿದೆ. ದಾಹೋದ್ ಕ್ಷೇತ್ರದಿಂದ ಬಿಜೆಪಿ ಮತ್ತೊಮ್ಮೆ ಹಾಲಿ ಸಂಸದ ಜಸ್ವಂತ್‌ಸಿನ್ಹ ಭಭೋರ್ ಅವರನ್ನು ಕಣಕ್ಕಿಳಿಸಿದೆ.
ಬಂಧಿತ ವಿಜಯ್ ಭಭೋರ್ ಜಸ್ವಂತಸಿಂಹ ಭಭೋರ್‌ನ ಮಗ ಎಂದು ಪ್ರತಿಪಕ್ಷ ಮುಖಂಡರು ಹೇಳಿದ್ದಾರೆ.
ಜನ ಪ್ರತಿನಿಧಿಗಳ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಹಿಸಾಗರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯದೀಪ್‌ಸಿನ್ಹ್ ಜಡೇಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಪ್ರಥಮಪುರ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಿದ ಇಬ್ಬರು ಆರೋಪಿಗಳಾದ ವಿಜಯ್ ಭಭೋರ್ ಮತ್ತು ಮನೋಜ್ ಮಗನ್ ಅವರನ್ನು ಬಂಧಿಸಿದ್ದೇವೆ. ಇಬ್ಬರು ಬಿಜೆಪಿ ಸದಸ್ಯರಾಗಿದ್ದು, ಆರೋಪಿ ವಿಜಯ್ ಭಭೋರ್‌ನ ತಂದೆ ರಮೇಶ್ ಭಾಭೋರ್ ಸಂತ್ರಂಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 171 ಮತ್ತು 188ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ” ಜಡೇಜಾ ಹೇಳಿದ್ದಾರೆ.
ಇದನ್ನೂ ಓದಿ : ಅಂಬಾನಿ, ಅದಾನಿಯಿಂದ ಟೆಂಪೋದಲ್ಲಿ ಹಣ ಬಂದಿರುವುದು ನಿಮ್ಮ ಸ್ವಂತ ಅನುಭವನಾ? ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು


