ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ ಮಾಡಿಸಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಮಧ್ಯಪ್ರದೇಶದ ಭೋಪಾಲ್‌ನ ಬಿಜೆಪಿ ನಾಯಕ ವಿನಯ್ ಮೆಹರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಮತಗಟ್ಟೆಯ ಅಧಿಕಾರಿ ಸಂದೀಪ್ ಸೈನಿ ಅವರನ್ನು ಅಮಾನತುಗೊಳಿಸಲಾಗಿದೆ.
ಮಂಗಳವಾರ (ಮೇ 7) ನಡೆದ 3ನೇ ಹಂತದ ಮತದಾನದ ವೇಳೆ, ಭೋಪಾಲ್‌ನ ಬೆರಾಸಿಯಾ ಮತಗಟ್ಟೆಯಲ್ಲಿ ತಮ್ಮ ಪುತ್ರನ ಮೂಲಕ ಮೆಹರ್ ಅವರು ಮತ ಚಲಾವಣೆ ಮಾಡಿಸಿದ್ದರು. ಅದನ್ನು ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್ ಆಗಿದ್ದು, ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
14 ಸೆಕೆಂಡುಗಳ ವಿಡಿಯೋ ಹಂಚಿಕೊಂಡು, ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಾಬೆಲೆ, “ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ವಿನಯ್ ಮೆಹರ್ ಅವರು ತಮ್ಮ ಅಪ್ರಾಪ್ತ ಮಗ ಮತ ಚಲಾಯಿಸುವಂತೆ ಮಾಡಿದ್ದಾರೆ. ಅದನ್ನು ವಿಡಿಯೋ ಮಾಡಿ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ವಿರುದ್ಧ ಏನಾದರು ಕ್ರಮ ಕೈಗೊಳ್ಳುತ್ತಾರಾ” ಎಂದು ಪ್ರಶ್ನಿಸಿದ್ದರು.
ವಿಡಿಯೋ ರೆಕಾರ್ಡ್ ಮಾಡಲು ಮತಗಟ್ಟೆಗೆ ಮೊಬೈಲ್ ಕೊಂಡೊಯ್ಯಲು ಹೇಗೆ ಅನುಮತಿ ನೀಡಲಾಯಿತು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಘಟನೆ ಕುರಿತು ಪರಿಶೀಲಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಮಧ್ಯ ಪ್ರದೇಶ ಬಿಜೆಪಿ ವಕ್ತಾರ ನರೇಂದ್ರ ಸಲೂಜಾ ಅವರು “ನಾವು ಘಟನೆಯನ್ನು ಪರಿಶೀಲಿಸುತ್ತೇವೆ. ಮತ ಹಾಕಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುತ್ತೇವೆ. ಅಕ್ರಮ ನಡೆದಿದ್ದರೆ ಕ್ರಮ ಜರುಗಿಸಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ : ಮತಗಟ್ಟೆಗೆ ನುಗ್ಗಿ ನಕಲಿ ಮತದಾನ, ನೇರ ಪ್ರಸಾರ: ಇಬ್ಬರು ಬಿಜೆಪಿಗರ ಬಂಧನ


