ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆ (ಯುಬಿಟಿ) ಯ ಹಿಂದುತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, “ನಮ್ಮ ಹಿಂದುತ್ವ ಜನರ ಮನೆಗಳಲ್ಲಿ ಒಲೆ ಹೊತ್ತಿಸಿದರೆ, ಬಿಜೆಪಿಯ ಹಿಂದುತ್ವ ಮನೆಯನ್ನೇ ಸುಡುತ್ತದೆ” ಎಂದಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ “ಬಿಜೆಪಿಯ ಹಿಂದುತ್ವಕ್ಕೂ ನಮ್ಮ ಹಿಂದುತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ಎಂದು ಹೇಳಿದ್ದಾರೆ.
“ಎಲ್ಲರಿಗೂ “ಕಾನೂನು ಸಮಾನತೆ” ಖಾತ್ರಿಪಡಿಸಲು ಸುಪ್ರೀಂ ಕೋರ್ಟ್‌ಗೆ ನಾವು ಮನವಿ ಮಾಡುವಾಗ, ಪ್ರಧಾನಿ ಮೋದಿ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಉದ್ದವ್ ಠಾಕ್ರೆ ಆರೋಪಿಸಿದ್ದಾರೆ.
“ಮೋದಿ ಸರ್ಕಾರ ನಮ್ಮ ಪಕ್ಷದ ವಿರುದ್ಧ ಭಾರತದ ಚುನಾವಣಾ ಆಯೋಗವನ್ನು ಬಳಸಿತ್ತು. “ನಮ್ಮ ಪಕ್ಷದ ಚಿಹ್ನೆಯಿಂದ ಬಿಲ್ಲು ಮತ್ತು ಬಾಣವನ್ನು ಕಸಿದುಕೊಳ್ಳಲಾಯಿತು. ನೀವು (ಪ್ರಧಾನಿ ಮೋದಿ) ನನ್ನ ಪಕ್ಷ, ನನ್ನ ಚಿಹ್ನೆ ಮತ್ತು ನನ್ನ ಜನರನ್ನು ಕಿತ್ತುಕೊಂಡಿದ್ದೀರಿ. ಆದರೆ, ನೀವು ಇನ್ನೂ ಉದ್ಧವ್ ಠಾಕ್ರೆಗೆ ಭಯಪಡುತ್ತಿದ್ದೀರಿ” ಎಂದು ಠಾಕ್ರೆ ಹೇಳಿದ್ದಾರೆ.
ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿದೆ ಎಂಬ ವರದಿಯ ಬಗ್ಗೆ ಮಾತನಾಡಿದ ಠಾಕ್ರೆ, “ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಈ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆಯ ಹೆಚ್ಚಳ ಅವರ ಸಾಧನೆಯೇ ಅಥವಾ ವೈಫಲ್ಯವೇ? ಎಂಬುವುದನ್ನು ಸ್ಪಷ್ಟಪಡಿಸಬೇಕು. ಮುಸ್ಲಿಂ ಜನಸಂಖ್ಯೆಯ ಹೆಚ್ಚಳಕ್ಕೆ ಅವರನ್ನು ಪ್ರಶಂಸಿಸಬೇಕೆ ಅಥವಾ ಟೀಕಿಸಬೇಕೆ? ಎಂದು ನಾವೆಲ್ಲರೂ ಗೊಂದಲಕ್ಕೊಳಗಾಗಿದ್ದೇವೆ ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಬಿಜೆಪಿ ಸರ್ಕಾರ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡಿದೆ ಎಂದು ಉದ್ಧವ್ ಕಿಡಿಕಾರಿದ್ದಾರೆ. “ಕೇಜ್ರಿವಾಲ್‌ಗೆ ಜಾಮೀನು ಸಿಕ್ಕಿದೆ, ಎಲ್ಲರಿಗೂ ತಿಳಿದಿದೆ. ಮೋದಿ ಸರ್ಕಾರ ಕೇಜ್ರಿವಾಲ್ ಅವರ ಎಲ್ಲಾ ಅಧಿಕಾರವನ್ನು ಕಿತ್ತುಕೊಂಡಿದೆ. ಜೂನ್ 4 ರವರೆಗೆ ಮೋದಿ ಅವರ ನಾಟಕ ನಡೆಯಲಿದೆ. ಜೂನ್ 4 ರ ನಂತರ ಅವರನ್ನು ಪ್ರಧಾನಿ ನರೇಂದ್ರ ಮೋದಿ ಎಂದು ಕರೆಯಲಾಗುವುದಿಲ್ಲ, ಕೇವಲ ನರೇಂದ್ರ ಮೋದಿ” ಎಂದು ಕರೆಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ‘ಸರ್ಜಿಕಲ್ ಸ್ಟ್ರೈಕ್’ ನಿಜವಾಗಿ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ: ರೇವಂತ್ ರೆಡ್ಡಿ


