ಇಂದೋರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರವನ್ನು ಹಿಂಪಡೆದು ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮತದಾರರಿಗೆ ನೋಟಾ ಬಟನ್ ಒತ್ತುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಅಕ್ಷಯ್ ಕಾಂತಿ ಬಾಮ್ ಇಂದೋರ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಗಳಿಸಿದ್ದರು, ಆದರೆ ಕೆಲವು ಹಳೆಯ ಪ್ರಕರಣಗಳಲ್ಲಿ ಪೋಲೀಸರು ಸಮನ್ಸ್ ನೀಡಿದ್ದಾರೆಂದು ತಮ್ಮ ನಾಮಪತ್ರವನ್ನು ಅವರು ಹಿಂತೆಗೆದುಕೊಂಡಿದ್ದರು. ಆ ಬಳಿಕ ಬಿಜೆಪಿಯ ಹಿರಿಯ ನಾಯಕರು ಮತ್ತು ಮಧ್ಯಪ್ರದೇಶ ಸಂಪುಟ ಸಚಿವರ ಸಮ್ಮುಖದಲ್ಲಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಬೆಳವಣಿಗೆಗಳು ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಶಂಕರ್ ಲಾಲ್ವಾನಿ ಅವರಿಗೆ ಚುನಾವಣೆಯಲ್ಲಿ ಗೆಲುವನ್ನು ಸುಲಭವಾಗಿಸಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಬದಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ ಈ ಕುರಿತ ಮನವಿಯನ್ನು ತಿರಸ್ಕರಿಸಿದ ನಂತರ ‘ಕಾಂಗ್ರೆಸ್’ ನೋಟಾ ಬಟನ್ ಒತ್ತಿ ಮತ್ತು ಪ್ರಜಾಪ್ರಭುತ್ವವನ್ನು ಕೊಂದ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸುವಂತೆ ಆಗ್ರಹಿಸಿದೆ.
ಕಳೆದ ಮುನ್ಸಿಪಲ್ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇಂದೋರ್‌ನ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಹೀಗಿದ್ದರೂ, ಬಿಜೆಪಿಯು ಅನ್ಯಾಯವಾಗಿ ಆಮಿಷವೊಡ್ಡುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಮತದಾರರು ನೋಟಾ ಆಯ್ಕೆಯನ್ನು ಆರಿಸುವ ಮೂಲಕ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕಿ ಶೋಭಾ ಓಜಾ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಸಜ್ಜನ್ ವರ್ಮಾ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಇಂದೋರ್ ಜನತೆಯಲ್ಲಿ ನಾನು ಮನವಿ ಮಾಡುತ್ತೇನೆ. ನಿಮ್ಮ ಮತದಾನದ ಹಕ್ಕನ್ನು ಕಸಿದುಕೊಂಡಿರುವ ಕೆಲವರು ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಕಳ್ಳತನ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಾದರೆ ನೋಟಾ ಬಟನ್ ಒತ್ತಿ ಪ್ರಜಾಪ್ರಭುತ್ವ ಉಳಿಸಿ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ನಾಲ್ಕನೇ ಹಂತದ ಮತದಾನ ಮೇ.13ರಂದು ನಡೆಯಲಿದ್ದು, 2013ರಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ನಂತರ ಭಾರತೀಯ ಮತದಾರರಿಗೆ ಪರ್ಯಾಯ ಆಯ್ಕೆಯಾಗಿ ನೋಟಾ ಆಯ್ಕೆಗಳನ್ನು ಸೇರಿಸಲಾಯಿತು. ಚುನಾವಣಾ ಕಣದಲ್ಲಿ ನಿಂತಿರುವ ಎಲ್ಲಾ ಅಭ್ಯರ್ಥಿಗಳೊಂದಿಗೆ ಮತದಾರರು ಅಸಮ್ಮತಿಯನ್ನು ದಾಖಲಿಸಲು ನೋಟಾ ಬಟನ್ ಮೂಲಕ ಅವಕಾಶವನ್ನು ನೀಡಲಾಗಿದೆ.
ಇದನ್ನು ಓದಿ: ಎನ್‌ಡಿಎ ಪ್ರಚಾರ ಸಭೆಗೆ 500ರೂ. ಹಣದ ಆಮಿಷ ನೀಡಿ ಕರೆದುಕೊಂಡು ಬಂದು ವಂಚನೆ: ಮಹಿಳೆಯರ ಆರೋಪ


