ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ರಘುಪತಿ ಭಟ್ ಇದೀಗ ವಿಧಾನ ಪರಿಷತ್‌ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಜೂ.3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ನಿನ್ನೆ ಪ್ರಕಟಿಸಿತ್ತು. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ್ ಪಾಟೀಲ್, ನೈಋತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಅ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೈ.ಎ.ನಾರಾಯಣಸ್ವಾಮಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಈ.ಸಿ.ನಿಂಗರಾಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಉಡುಪಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ರಘುಪತಿ ಭಟ್‌ಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಯಶ್ಪಲ್ ಸುವರ್ಣಾಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ರಘಪತಿ ಭಟ್ ಸಾರ್ವಜನಿಕವಾಗಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷ ನಡೆಸಿಕೊಂಡ ರೀತಿ ಸಾಕಷ್ಟು ಬೇಸರ ತಂದಿದೆ ಎಂದು ಹೇಳಿದ್ದರು. ರಘುಪತಿ ಭಟ್ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರಿಗೆ ಪರಿಷತ್ ಟಿಕೆಟ್ ನೀಡುವುದಾಗಿ ಹೇಳಿ ಬಿಜೆಪಿ ಹೈಕಮಾಂಡ್ ಸಮಾಧಾನ ಮಾಡಿತ್ತು ಎಂದು ಹೇಳಲಾಗಿದೆ. ಆ ಬಳಿಕ ಅವರು ಪರಿಷತ್ ಚುನಾವಣೆ ಸ್ಪರ್ಧೆಗೆ ಸಿದ್ಧತೆ ಮಾಡುತ್ತಿದ್ದರು. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಪದವೀಧರರ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರನ್ನು ಅವರು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು. ಆದರೆ ಇದೀಗ ಅವರಿಗೆ ಟಿಕೆಟ್ ಕೈತಪ್ಪಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
ರಘುಪತಿ ಭಟ್ ಫೇಸ್ಬುಕ್ ಪೋಸ್ಟ್ನಲ್ಲಿ ಏನೇನಿದೆ?
ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಯ ನಿಲುವಿನಿಂದ ವಿಚಲಿತನಾಗಿದ್ದೇನೆ.
1994ರಿಂದಲೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ್ದೇನೆ. ವಿಧಾನ ಸಭೆಗೆ ಸ್ಪರ್ಧಿಸಿದ 3 ಬಾರಿಯೂ ಗೆದ್ದಿರುತ್ತೇನೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ ನನ್ನನ್ನು ಬದಲಾಯಿಸಲಾಯಿತು.
ನನ್ನ ಹೆಸರಿನ ಬದಲು ಬೇರೆ ಹೆಸರು ಘೋಷಣೆಯಾಗಿದ್ದು, ಟಿವಿ ಮೂಲಕ ತಿಳಿಯಿತು. ಆದರೆ ನಾನು ವಿಚಲಿತನಾಗದೆ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದರು. ಆ ಪ್ರಕಾರ ಪದವೀಧರರ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ್ದೇನೆ. ಅಲ್ಲದೆ ಪಕ್ಷ ನೀಡಿದ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಭಾರಿ ಜವಾಬ್ದಾರಿಯನ್ನು 40 ದಿನಗಳ ಕಾಲ ಶಿವಮೊಗ್ಗದಲ್ಲಿ ಉಳಿದು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ.
ಈಗ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಆದರೆ ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರ ನೀಡದೆ ಮಾಡಿದ ಅನ್ಯಾಯಕ್ಕೆ ನ್ಯಾಯ ಕೊಡುವವರು ಯಾರು?ಪಕ್ಷ ತೆಗೆದುಕೊಂಡಿರುವ ಈ ನಿಲುವಿಂದ ವಿಚಲಿತನಾಗಿದ್ದೇನೆ. ಇದು ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ, ಚರ್ಚಿಸೋಣ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: ಮೋದಿ ವಿರುದ್ಧ ಸ್ಪರ್ಧೆ: ವಾರಣಾಸಿಯಲ್ಲಿ ಅಧಿಕಾರಿಗಳು ನಾಮಪತ್ರದ ಅರ್ಜಿಯೇ ಕೊಡುತ್ತಿಲ್ಲ; ಶ್ಯಾಮ್ ರಂಗೀಲಾ ಆರೋಪ


