ಪೌರತ್ವದ ಕುರಿತು ಮಟುವಾ ಸಮುದಾಯದ ಕಳವಳವನ್ನು ಪರಿಹರಿಸುವ ಪ್ರಯತ್ನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ. “ಸಮುದಾಯವು ಸಿಎಎ ಅಡಿಯಲ್ಲಿ ಪೌರತ್ವವನ್ನು ಪಡೆಯುತ್ತಾರೆ; ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಮಟುವಾ ಸಮುದಾಯದ ಭದ್ರಕೋಟೆ ಬೊಂಗಾವ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, “ಮಮತಾ ಬ್ಯಾನರ್ಜಿಯವರು ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಅನುಷ್ಠಾನವನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ, ಇದು ಕೇಂದ್ರ ಸರ್ಕಾರದ ಕಾನೂನಾಗಿದೆ. ನನ್ನ ನಿರಾಶ್ರಿತ ಸಹೋದರರು ಭಾರತದ ನಾಗರಿಕರಾಗುವುದನ್ನು ವಿಶ್ವದ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ; ಇದು ಮೋದಿಯವರ ಭರವಸೆ. ಪೌರತ್ವವು ಕೇಂದ್ರ ಸರ್ಕಾರದ ವಿಶೇಷ ಅಧಿಕಾರದ ಅಡಿಯಲ್ಲಿ ಬರುತ್ತದೆ, ರಾಜ್ಯ ಸರ್ಕಾರಗಳಲ್ಲ ಎಂಬುದನ್ನು ಮಮತಾ ಬ್ಯಾನರ್ಜಿ ನೆನಪಿಟ್ಟುಕೊಳ್ಳಬೇಕು” ಎಂದು ಅವರು ಹೇಳಿದರು.
ಬ್ಯಾನರ್ಜಿ ಅವರು ಸುಳ್ಳು ಮತ್ತು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾ ಆರೋಪಿಸಿದರು.
“ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಯಾರಾದರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ. ಮಟುವಾ ಸಮುದಾಯದ ಜನರಿಗೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಲು ಬಂದಿದ್ದೇನೆ. ನೀವು ಪೌರತ್ವವನ್ನು ಪಡೆಯುತ್ತೀರಿ ಮತ್ತು ದೇಶದಲ್ಲಿ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ‘ಕೇಜ್ರಿವಾಲ್ ಸಹಾಯಕ ಅನುಚಿತವಾಗಿ ವರ್ತಿಸಿದ್ದಾರೆ..’; ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಪ್ರತಿಕ್ರಿಯಿಸಿದ ಎಎಪಿ


