ಐದು ವರ್ಷಗಳ ಹಿಂದಿನ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪತ್ರಕರ್ತ ಆಸಿಫ್ ಸುಲ್ತಾನ್‌ಗೆ ಶ್ರೀನಗರದ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಈ ಪ್ರಕರಣವು 2019ರಲ್ಲಿ ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿ ನಡೆದ ಗಲಭೆ ಘಟನೆಗೆ ಸಂಬಂಧಿಸಿದೆ. ಕೈದಿಗಳ ಗುಂಪು ಕೆಲ ಬ್ಯಾರಕ್‌ಗಳಿಗೆ ಬೆಂಕಿ ಹಚ್ಚಿ ಜೈಲು ಸಿಬ್ಬಂದಿಯ ಮೇಲೆ ಕಲ್ಲು ಎಸೆದಿತ್ತು ಎಂದು ಆರೋಪಿಸಲಾಗಿತ್ತು.
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಿಂದ ಬಿಡುಗಡೆಯಾದ ಎರಡು ದಿನಗಳ ನಂತರ ಫೆಬ್ರವರಿ 29 ರಂದು ಸುಲ್ತಾನ್ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಸಾರ್ವಜನಿಕ ಸುರಕ್ಷತಾ ಕಾಯಿದೆಯು ಅಧಿಕಾರಿಗಳು ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಎರಡು ವರ್ಷಗಳವರೆಗೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಒಂದು ವರ್ಷದವರೆಗೆ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಬಂಧನದಲ್ಲಿಡಲು ಅನುಮತಿಸುತ್ತದೆ.
ಮೇ 10 ರಂದು ತನ್ನ ಆದೇಶದಲ್ಲಿ, ಶ್ರೀನಗರದ ರಾಷ್ಟ್ರೀಯ ತನಿಖಾ ಕಾಯಿದೆಯಡಿಯ ವಿಶೇಷ ನ್ಯಾಯಾಲಯವು ಸುಲ್ತಾನ್ ಅವರನ್ನು ಕಸ್ಟಡಿಯಲ್ಲಿ ವಿಚಾರಣೆ ಮಾಡಲು ಪೊಲೀಸರಿಗೆ 72 ದಿನಗಳ ಸಾಕಷ್ಟು ಸಮಯವನ್ನು ನೀಡಲಾಗಿದೆ ಎಂದು ಹೇಳಿತ್ತು.
ಸುಲ್ತಾನ್ ಅವರು ಜಮ್ಮು ಕಾಶ್ಮೀರದ ಖಾಯಂ ನಿವಾಸಿಯಾಗಿರುವುದರಿಂದ ಅವರು ಅಲ್ಲಿಂದ ಪಲಾಯನಗೈಯ್ಯುವ ಸಾಧ್ಯತೆ ಕಡಿಮೆ ಎಂದು ಹೇಳಿದ ನ್ಯಾಯಾಧೀಶರು, ರೂ 1 ಲಕ್ಷ ಬಾಂಡ್ ನೀಡಿ ಅವರು ಜಾಮೀನು ಪಡೆಯಬಹುದೆಂದು ತಿಳಿಸಿತ್ತು. ಅಗತ್ಯವಿರುವಾಗಲೆಲ್ಲಾ ಸುಲ್ತಾನ್ ಅವರು ತನಿಖಾಧಿಕಾರಿಯೆದುರು ಹಾಜರಾಗಬೇಕು ಹಾಗೂ ತಮ್ಮ ಮೊಬೈಲ್ ಸಂಖ್ಯೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ : ‘ಯುಎಪಿಎ’ಯಡಿ ಪ್ರಬೀರ್ ಪುರಕಾಯಸ್ಥ ಬಂಧನ ಅಸಿಂಧು: ತಕ್ಷಣ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ


