ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಕಳೆದ ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಿಂದ ಬಂಧಿಸಲ್ಪಟ್ಟಿದ್ದ ಉಳ್ಳಾಲದ ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗ ಅಮ್ಮಾರ್ ಅಬ್ದುಲ್ ರೆಹಮಾನ್‌ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಒಬ್ಬರು ವ್ಯಕ್ತಿಯ ಮೊಬೈಲ್‌ನಲ್ಲಿ ಐಸಿಸ್ ಧ್ವಜ ಮತ್ತು ಕರಪತ್ರಗಳು ಇದ್ದ ಮಾತ್ರಕ್ಕೆ ಅವರನ್ನು ಭಯೋತ್ಪಾದಕ ಎನ್ನಲಾಗದು ಎಂದು ನ್ಯಾಯಾಲಯ ಹೇಳಿರುವುದಾಗಿ ವರದಿಯಾಗಿದೆ.
ಆಗಸ್ಟ್ 21,2021 ರಂದು ಯುಎಪಿಎ ಕಾಯ್ದೆಯಡಿಯಲ್ಲಿ ಎನ್‌ಐಎ ಅಮ್ಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮನೆಯಿಂದ ಬಂಧಿಸಿತ್ತು. ತನ್ನ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್‌ನಲ್ಲಿ ಅಮ್ಮಾರ್ ಅಬ್ದುಲ್ ರೆಹಮಾನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ನಿರಾಕರಿಸಿದ ಹಿನ್ನೆಲೆ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ನಂತರ ಹೈಕೋರ್ಟ್ ಜಾಮೀನು ನೀಡಿದೆ.
“ಕೇವಲ ಭಯೋತ್ಪಾದಕ ಸಂಘಟನೆಯತ್ತ ಆಕರ್ಷಣೆ ಭಯೋತ್ಪಾದನೆಯಾಗುವುದಿಲ್ಲ. ಐಸಿಸ್ ಪರ ಭಾಷಣಗಳನ್ನು ಕೇಳುವುದು ಯುಎಪಿಎ ಕಾಯ್ದೆಯ ಸೆಕ್ಷನ್ 38 ಮತ್ತು 39ರ ಅಡಿಯಲ್ಲಿ ಬರುವುದಿಲ್ಲ. ಐಸಿಸ್ ಧ್ವಜಗಳು ಮತ್ತು ಲಾಡೆನ್ ಭಾಷಣಗಳ ಭಾಗಗಳು ಅಮ್ಮಾರ್ ಅವರ ಮೊಬೈಲ್‌ನಲ್ಲಿ ಕಂಡು ಬಂದಿದ್ದರೂ, ಅಂತಹ ವಿಷಯಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಇದು ಅವರನ್ನು ಐಸಿಸ್ ಸದಸ್ಯರನ್ನಾಗಿ ಮಾಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಅಮ್ಮಾರ್ ಬಂಧನದ ನಂತರ ಜನವರಿ 4 ರಂದು ದಿವಂಗತ ಶಾಸಕ ಇದಿನಬ್ಬ ಅವರ ಸೊಸೆ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ ಅವರನ್ನು ಎನ್‌ಐಎ ಬಂಧಿಸಿತ್ತು. ಇದಿನಬ್ಬ ಅವರ ಮಗ ಅನಸ್ ಅಬ್ದುಲ್ ಅವರನ್ನು ವಿವಾಹವಾದ ನಂತರ ಇಸ್ಲಾಂಗೆ ಮತಾಂತರಗೊಂಡ ದೀಪ್ತಿ ಮಾರ್ಲಾ, ಅಮ್ಮಾರ್ ನಿರ್ದೇಶನದ ಮೇರೆಗೆ ಐಸಿಸ್‌ಗಾಗಿ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಎನ್‌ಐಎ ಮಾರ್ಚ್ 5,2021ರಂದು ದೆಹಲಿಯಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿದೆ. ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಅಮ್ಮಾರ್ ಅಬ್ದುಲ್ ರೆಹಮಾನ್ ಅವರಿಗೆ ಜಾಮೀನು ದೊರೆತರೆ, ದೀಪ್ತಿ ಮಾರ್ಲಾ ಇನ್ನೂ ಎನ್‌ಐಎ ಕಸ್ಟಡಿಯಲ್ಲೇ ಇದ್ದಾರೆ.
ಇದನ್ನೂ ಓದಿ : ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು


