ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ ‘ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)’ ಕಂಪನಿ ಮತ್ತು ರಾಜ್ಯ ಸರ್ಕಾರದ ನಡುವೆ ಜಟಾಪಟಿ ಹೆಚ್ಚಾದಂತೆ ಕಾಣುತ್ತಿದೆ.
“ಎಲ್ & ಟಿ ಹೈದರಾಬಾದ್ ಮೆಟ್ರೋ ನಿರ್ವಹಣೆಯಿಂದ ಹೊರ ಹೋಗಬಹುದು” ಎಂದು ಹೇಳುವ ಮೂಲಕ ಸಿಎಂ ರೇವಂತ್ ರೆಡ್ಡಿ ಕಂಪನಿ ವಿರುದ್ದ ಕಠಿಣ ನಿಲುವು ತಾಳುವ ಸೂಚನೆ ನೀಡಿದ್ದಾರೆ.
ಕರ್ನಾಟಕದ ‘ಶಕ್ತಿ’ ಯೋಜನೆಯಂತೆ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಟಿಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ‘ಮಹಾಲಕ್ಷಿ’ ಯೋಜನೆಯನ್ನು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಿಂದ ಮೆಟ್ರೋ ಆದಾಯದ ಮೇಲೆ ಹೊಡೆತ ಬಿದ್ದಿದೆ. ‘ಮಹಾಲಕ್ಷ್ಮಿ’ ಯೋಜನೆ ಜಾರಿಗೆ ಬಂದ ನಂತರ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದೈನಂದಿನ ಪ್ರಯಾಣಿಕರ ಸಂಖ್ಯೆ ನವೆಂಬರ್ 2023ರಲ್ಲಿ 5,50,000 ರಿಂದ 4,80,000ಕ್ಕೆ ಇಳಿದಿದೆ ಎಂದು ಎಲ್&ಟಿ ಆರೋಪಿಸಿದೆ. ಯೋಜನೆಯನ್ನು ಮಾರಾಟ ಮಾಡುತ್ತೇವೆ ಎಂದಿದೆ.
ಎಲ್&ಟಿ ವಿರುದ್ದ ಗುಡುಗಿದ ಸಿಎಂ ರೇವಂತ್ ರೆಡ್ಡಿ
ಮೇಡಿಗಡ್ಡ ಬ್ಯಾರೇಜ್ ವಿಷಯ ಪ್ರಸ್ತಾಪಿಸುವ ಮೂಲಕ ಸರ್ಕಾರದ ಯೋಜನೆಯನ್ನು ಟೀಕಿಸಿರುವ ಎಲ್&ಟಿ ಕಂಪನಿ ವಿರುದ್ದ ಸಿಎಂ ರೇವಂತ್ ರೆಡ್ಡಿ ಗುಡುಗಿದ್ದಾರೆ. ರಾಜ್ಯ ಸರ್ಕಾರದ ಬಹುದೊಡ್ಡ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಭಾಗವಾದ ಮೇಡಿಗಡ್ಡ ಬ್ಯಾರೇಜ್, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮುಳುಗಡೆಯಾಗಿತ್ತು. ಅದರೆ ದುರಸ್ಥಿಗೆ ಗುತ್ತಿಗೆ ಕಂಪನಿ ಎಲ್&ಟಿ ನಿರಾಕರಿಸಿದ್ದು, ಇದರ ವಿರುದ್ದ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, “ಎಲ್&ಟಿ ಹೈದರಾಬಾದ್ ಮೆಟ್ರೋದಿಂದ ನಿರ್ಗಮಿಸಲು ಬಯಸಿರುವುದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತದೆಯೇ ಹೊರತು, ಕಾರ್ಪೋರೇಟ್ ಕಂಪನಿಗಾಗಿ ಅಲ್ಲ. ಎಲ್&ಟಿ ಹೊರ ಹೋಗಲು ಬಯಸಿದರೆ ಹೋಗಲಿ, ಹಾಗೆಯೇ ಮಾಡುವುದು ಸ್ವಾಗತಾರ್ಹ” ಎಂದಿದ್ದಾರೆ.
“ಎಲ್&ಟಿ ಹೊರ ಹೋದರೆ ಮೆಟ್ರೋ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಇನ್ನೊಬ್ಬರನ್ನು ಹುಡುಕಲಿದೆ. ನಾನು ಮೆಟ್ರೋ ಯೋಜನೆಯ ವಿರೋಧಿಯಲ್ಲ. ಸಾರ್ವಜನಿಕ ಸಾರಿಗೆಯಾಗಿರುವ ಮೆಟ್ರೋವನ್ನು ಎಲ್&ಟಿ ಅಲ್ಲದಿದ್ದರೆ ಇನ್ನೊಬ್ಬರು ನಿರ್ವಹಿಸಬಹುದು” ಎಂದು ಸಿಎಂ ಹೇಳಿದ್ದಾರೆ.
“ಕಾರ್ಪೊರೇಟ್ ಕಂಪನಿಗಳು ನೋಡುವಂತೆ ಸರ್ಕಾರಗಳು ಬ್ಯಾಲೆನ್ಸ್ ಶೀಟ್‌ಗಳನ್ನು ನೋಡುವುದಿಲ್ಲ. ಸರ್ಕಾರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ, ಕಾರ್ಪೊರೇಟ್‌ಗಳಂತೆ ಲಾಭದ ಉದ್ದೇಶವಿಲ್ಲ” ಎಂದಿದ್ದಾರೆ.
ಸರ್ಕಾರಗಳು ಮಾಲಿನ್ಯವನ್ನುಂಟುಮಾಡುವ ಬಸ್‌ಗಳ ಪ್ರಯಾಣವನ್ನು ಉತ್ತೇಜಿಸುವ ನೀತಿಗಳನ್ನು ಅಳವಡಿಸಿಕೊಳ್ಳುವುದಕ್ಕಿಂತ, ಶೂನ್ಯ ಮಾಲಿನ್ಯ ಸಾರಿಗೆ ವ್ಯವಸ್ಥೆಗೆ ಬದಲಾಗಬೇಕು ಎಂಬ ಹೈದರಾಬಾದ್ ಮೆಟ್ರೋ ರೈಲಿನ ಮುಖ್ಯ ಹಣಕಾಸು ಅಧಿಕಾರಿ ಆರ್ ಶಂಕರ್ ರಾಮನ್ ಅವರ ಸಲಹೆ ಸಿಎಂ ರೇವಂತ್ ರೆಡ್ಡಿಯನ್ನು ಕೆರಳಿಸಿದೆ.
ಇತ್ತೀಚೆಗಷ್ಟೇ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮಹಾಲಕ್ಷ್ಮಿ ಯೋಜನೆಯನ್ನು ಟೀಕಿಸಿದ್ದರು. “ಚುನಾವಣಾ ಭರವಸೆಯನ್ನು ಈಡೇರಿಸಲು ಸರ್ಕಾರವು ಸಾರ್ವಜನಿಕ ಸಾರಿಗೆ ಸೌಲಭ್ಯದಿಂದ (ಮೆಟ್ರೋ) ಶೇಕಡಾ 50 ರಷ್ಟು ಪ್ರಯಾಣಿಕರನ್ನು ಕೆಳಗಿಳಿಸುವುದು ಸರಿಯಲ್ಲ. ಇಂತಹ ಕ್ರಮಗಳು ರಾಜ್ಯದ ಬೊಕ್ಕಸವನ್ನು ಹೇಗೆ ಖಾಲಿ ಮಾಡುತ್ತದೆ ಮತ್ತು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದನ್ನು ತೋರಿಸುತ್ತದೆ” ಎಂದಿದ್ದರು.
ನವೆಂಬರ್ 28,2017 ರಂದು ಮಿಯಾಪುರ್‌ನಿಂದ ನಾಗೋಲ್‌ವರೆಗಿನ 30 ಕಿ.ಮೀ ದೂರದ ಹೈದರಾಬಾದ್ ಮೆಟ್ರೋ ರೈಲನ್ನು ಉದ್ಘಾಟಿಸಿದ ನರೇಂದ್ರ ಮೋದಿಯವರು, ಆಗಿನ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಮತ್ತು ಆಗಿನ ರಾಜ್ಯಪಾಲರಾದ ಇಎಸ್ಎಲ್ ನರಸಿಂಹನ್ ಅವರೊಂದಿಗೆ ಮೊದಲ ಸವಾರಿ ಮಾಡಿದ್ದರು. ಅಂದಿನಿಂದ ಹೈದರಾಬಾದ್ ಮೆಟ್ರೋ ರೈಲು ವೆಚ್ಚ-ಪರಿಣಾಮಕಾರಿ ಮತ್ತು ಸಮಯವನ್ನು ಉಳಿಸುವ ಮೂಲಕ ಅತ್ಯಂತ ಜನಪ್ರಿಯ ಸಾರಿಗೆ ಸಾಧನವಾಗಿದೆ.
ಹೈದರಾಬಾದ್ ಮೆಟ್ರೋ ರೈಲು 2021ರಲ್ಲಿ ನಷ್ಟ ಅನುಭವಿಸಿದ ಬಗ್ಗೆ ಹೇಳಿತ್ತು. ಆ ಬಳಿಕ ಎಲ್&ಟಿ ಕೂಡ ಈ ಬಗ್ಗೆ ಧ್ವನಿಯೆತ್ತಿತ್ತು. ಹಾಗಾಗಿ, ಆಗಿನ ಸಿಎಂ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ಮೆಟ್ರೋ ರೈಲನ್ನು ನಷ್ಟದಿಂದ ಹೊರ ತರಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು ಸಮಿತಿಯನ್ನು ರಚಿಸಿದ್ದರು.
ಜೂನ್ 2023ರಲ್ಲಿ, ತೆಲಂಗಾಣ ಸರ್ಕಾರ ಹೈದರಾಬಾದ್ ಮೆಟ್ರೋ ರೈಲಿಗೆ ರೂ.100 ಕೋಟಿ ಬಡ್ಡಿ ರಹಿತ ಸಾಲ ನೀಡಿತ್ತು. ಕಂಪನಿಯ ಕಾರ್ಯಾಚರಣೆಯ 16ನೇ ವರ್ಷದಲ್ಲಿ ಈ ಸಾಲವನ್ನು ಮರುಪಾವತಿಸಬೇಕಾಗಿತ್ತು ಮತ್ತು 2021-22 ರಲ್ಲಿ 1,745 ಕೋಟಿಗಳಿಂದ 2022-23 ರಲ್ಲಿ ₹ 1,315 ಕೋಟಿಗೆ ನಷ್ಟವನ್ನು ಕಡಿಮೆ ಮಾಡಲು ಸಾಲವನ್ನು ಬಳಸಬೇಕಿತ್ತು.
ಮೂಲಗಳ ಪ್ರಕಾರ, ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ (ಎನ್‌ಡಿಎಸ್‌ಎ) ಸೂಚಿಸಿದಂತೆ ಮೇಡಿಗಡ್ಡ ಬ್ಯಾರೇಜ್ ಅನ್ನು ತನ್ನ ಸ್ವಂತ ವೆಚ್ಚದಲ್ಲಿ ದುರಸ್ತಿ ಮಾಡಲು ರಾಜ್ಯ ಸರ್ಕಾರವು ಎಲ್ & ಟಿಗೆ ಸೂಚಿಸಿದೆ. ಒಂದು ವೇಳೆ ಎಲ್&ಟಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ದುರಸ್ತಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ವಸೂಲಿ ಮಾಡಲು ಸರ್ಕಾರ ಚಿಂತಿಸುತ್ತಿದೆ. ಸಿಎಂ ರೇವಂತ್ ರೆಡ್ಡಿ ಅವರು ಎಲ್ & ಟಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಿರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!


