ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ ‘ನಿಂದನೆಯು ಸಾರ್ವಜನಿಕವಾಗಿರಬೇಕು’ ಎಂಬುವುದನ್ನು ಒತ್ತಿ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇದ್ದ ವಿಭಾಗೀಯ ಪೀಠವು, ಈ ಕಾಯ್ದೆಯಡಿಯಲ್ಲಿ ಮಾಡುವ ಯಾವುದೇ ಆರೋಪವು, ಅಪರಾಧಿಕ ಅಂಶಗಳನ್ನು ಹೊಂದಿದೆಯೇ ಎಂಬುದನ್ನು ತೀರ್ಮಾನಿಸುವಾಗ ‘ಸಾರ್ವಜನಿಕರಿಗೆ ಕಾಣಿಸುವ ಯಾವುದೇ ಸ್ಥಳದಲ್ಲಿ’ ಎಂದು ಕಾಯ್ದೆಯಲ್ಲಿ ಹೇಳಿರುವ ಮಾತು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ ಎಂದು ಹೇಳಿದೆ.
‘ಸಾರ್ವಜನಿಕರಿಗೆ ಕಾಣಿಸುವಂತಹ ಸ್ಥಳದಲ್ಲಿ’ ಎಂಬ ವಿವರಣೆಯ ಅನ್ವಯ, ದೂರುದಾರರ ಹೊರತಾಗಿ ಇತರ ವ್ಯಕ್ತಿಗಳಿಗೆ ಕಾಣಿಸುವಂತೆ ಆ ಕೃತ್ಯ ನಡೆದಿರಬೇಕು ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.
ಈ ಕಾಯ್ದೆಯ ಅಡಿಯಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪ್ರೀತಿ ಅಗರ್ವಾಲ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ಪೀಠವು ಈ ವಿವರಣೆ ನೀಡಿದೆ.
ಅಂತರಾಷ್ಟ್ರೀಯ ಕುದುರೆ ಸವಾರಿ ಚಾಂಪಿಯನ್‌ನ ದೂರಿನ ಮೇರೆಗೆ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧಗಳಿಗೆ ಎಫ್‌ಐಆರ್ ದಾಖಲಿಸುವ ಆದೇಶದ ವಿರುದ್ಧ ಪ್ರೀತಿ ಅಗರ್‌ವಾಲಾ ಮತ್ತು ಪೋಷಕರು ಮತ್ತು ಒಲಿಂಪಿಕ್ ರೈಡಿಂಗ್ ಮತ್ತು ಇಕ್ವೆಸ್ಟ್ರಿಯನ್ ಅಕಾಡೆಮಿಯ(ಒಆರ್‌ಇಎ) ತರಬೇತಿ ಅಥ್ಲೀಟ್‌ಗಳು ಮಾಡಿದ ಮನವಿಯನ್ನು ನ್ಯಾಯಾಲಯವು ಅಂಗೀಕರಿಸಿದೆ.
ಮೇಲ್ಮನವಿದಾರರ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ವಾದ ಮಂಡಿಸಿದ್ದಾರೆ. ವಾಟ್ಸ್ಆ್ಯಪ್ ಮೂಲಕ ನಡೆದಿರುವ ಮಾತುಕತೆಗಳು ಕಾಯ್ದೆಯ ಅಡಿಯಲ್ಲಿ ಅಪರಾಧಿಕ ಅಂಶಗಳನ್ನು ಹೊಂದಿರುವುದು ಮೇಲ್ನೋಟಕ್ಕೆ ಕಾಣುವುದಿಲ್ಲ ಎಂದು ಹೇಳಿದ್ದರು. 1989ರ ಕಾಯಿದೆಯ ಸೆಕ್ಷನ್ 3 (1) (ಆರ್) ಅಡಿಯಲ್ಲಿ ಅಪರಾಧವನ್ನು ರೂಪಿಸುವ ಯಾವುದೇ ಅಂಶಗಳನ್ನು ವಾಟ್ಸಾಪ್ ಸಂಭಾಷಣೆಯು ಹೊಂದಿಲ್ಲ ಎಂದು ಹೇಳಲಾಗಿದೆ.
ವಕೀಲ ಕಪಿಲ್ ನಾಥ್ ಮೋದಿ ಅವರು ದೂರಿನಲ್ಲಿ ಕಾಗ್ನಿಸಬಲ್ ಅಪರಾಧಗಳನ್ನು ಬಹಿರಂಗಪಡಿಸಿದ್ದಾರೆ ಮತ್ತು ದೂರುದಾರರು ತಿಂಗಳುಗಳು ಮತ್ತು ವರ್ಷಗಳ ಕಾಲ ಜಾತಿ ನಿಂದನೆಗಳನ್ನು ಮೌನವಾಗಿ ಅನುಭವಿಸಿದ್ದಾರೆ ಮತ್ತು ಕೇವಲ ವಿಳಂಬವು ಯಾವುದೇ ಪ್ರತಿಕೂಲ ತೀರ್ಮಾನಕ್ಕೆ ಕಾರಣವಾಗುವುದಿಲ್ಲ ಎಂದು ವಾದಿಸಿದ್ದರು.
CrPCಯ ಸೆಕ್ಷನ್ 156(3) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಎಫ್‌ಐಆರ್ ಮತ್ತು ತನಿಖೆ ನಡೆಸುವ ಬಗ್ಗೆ ಭಿನ್ನ ಅಭಿಪ್ರಾಯಗಳಿಲ್ಲ. ಅರ್ಜಿಯಲ್ಲಿನ ನಿರ್ದಿಷ್ಟ ಆರೋಪಗಳು ಅಸ್ಪಷ್ಟವಾಗಿದ್ದರೆ ಅದು ಎಫ್‌ಐಆರ್ ಮತ್ತು ತನಿಖೆಯ ನೋಂದಣಿಗೆ ಆದೇಶಕ್ಕೆ ಕಾರಣವಾಗುವುದಿಲ್ಲ ಎಂದು ಪೀಠವು ಹೇಳಿದೆ.
ಇದನ್ನು ಓದಿ: ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?


