ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಉತ್ಪನ್ನದ ಬಗ್ಗೆ ಕಳವಳ ವ್ಯಕ್ತವಾದ ಹಿನ್ನೆಲೆ 2019ರ ಸೆಪ್ಟಂಬರ್‌ನಲ್ಲಿ ಪಿಥೋರಗಢದ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಬೆರಿನಾಗ್ ಮಾರುಕಟ್ಟೆಯ ಅಂಗಡಿಯಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಉಧಾಮ್‍ಸಿಂಗ್‍ನಗರ ಜಿಲ್ಲೆಯ ರುದ್ರಾಪುರದ ರಾಜ್ಯ ಆಹಾರ ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ 2019ರ ಮೇ 18ರಂದು ಗುಣಮಟ್ಟ ಪರೀಕ್ಷೆ ನಡೆದಿತ್ತು. ಪರೀಕ್ಷಾ ಫಲಿತಾಂಶಗಳು ಕಳಪೆ ಗುಣಮಟ್ಟವನ್ನು ಬಹಿರಂಗಪಡಿಸಿದ್ದವು, ನಂತರ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಮೂವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.
ಪಿಥೋರಗಢ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಂಜಯ್ ಸಿಂಗ್ ಅವರು ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್, ಲಕ್ಸಾರ್‌ನ ಸಹಾಯಕ ಜನರಲ್ ಮ್ಯಾನೇಜರ್ ಅಭಿಷೇಕ್ ಕುಮಾರ್, ಕನ್ಹಾ ಜಿ ಡಿಸ್ಟ್ರಿಬ್ಯೂಟರ್ ಪ್ರೈವೇಟ್ ಲಿಮಿಟೆಡ್ ರಾಮನಗರದ ಸಹಾಯಕ ವ್ಯವಸ್ಥಾಪಕ ಅಜಯ್ ಜೋಶಿ ಮತ್ತು ಸ್ಟೋರ್ ಕೀಪರ್ ಲೀಲಾಧರ್ ಪಾಠಕ್ ಅವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಸೆಕ್ಷನ್ 59ರ ಅಡಿಯಲ್ಲಿ 6 ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.
ನ್ಯಾಯಾಲಯವು ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ಅಜಯ್ ಜೋಶಿಗೆ ತಲಾ 10,000 ರೂ. ದಂಡ ವಿಧಿಸಿದರೆ, ಅಭಿಷೇಕ್ ಕುಮಾರ್ 25,000 ರೂ. ಮತ್ತು ಪಾಠಕ್‌ಗೆ 5,000 ರೂ.ದಂಡವನ್ನು ಕೂಡ ವಿಧಿಸಿದೆ.
ಮೂವರು ಆರೋಪಿಗಳು ತಮ್ಮ ಶಿಕ್ಷೆಯನ್ನು ಪೂರೈಸಲು ವಿಫಲವಾದರೆ, ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.
ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಸಿಲುಕಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಇತರರಿಗೆ ನೀಡಿರುವ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) 2022ರಲ್ಲಿ ಪತಂಜಲಿಯ ಜಾಹೀರಾತುಗಳಲ್ಲಿ “ಸುಳ್ಳು” ಮತ್ತು “ದಾರಿ ತಪ್ಪಿಸುವ” ಅಂಶಗಳನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅಲೋಪತಿ ಔಷಧಗಳ ಕುರಿತು ಅಪಪ್ರಚಾರ ಮಾಡುತ್ತಿರುವ ಕಾರಣ ಬಾಬಾ ರಾಮದೇವ್ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಹಲವು ಕಾಯಿಲೆಗಳ ಚಿಕಿತ್ಸೆ ಮತ್ತು ಔಷಧಿಗಳಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪತಂಜಲಿ ಆರ್ಯುವೇದ ನೀಡುತ್ತಿರುವುದರ ವಿರುದ್ಧ ನವೆಂಬರ್‌ನಲ್ಲಿಯೇ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು.
ಇದನ್ನು ಓದಿ: ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು


