ಬಿಜೆಪಿ ಸರ್ಕಾರದ ನೀತಿಗಳು ಭಾರತದಲ್ಲಿ ಹಿಂದೆಂದೂ ಕಾಣದಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲು ಸಹಾಯ ಮಾಡಿದೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಬಹುತ್ವ ಕರ್ನಾಟಕದ ಜಂಟಿ ವರದಿ ಬಹಿರಂಗಪಡಿಸಿದೆ.
‘ಗ್ಯಾರಂಟಿ ಚೆಕ್: ಕಳೆದ ದಶಕದಲ್ಲಿ ಭಾರತದ ಪರಿಸರದ ಸ್ಥಿತಿ – ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟು’ ಎಂಬ ಶೀರ್ಷಿಕೆಯ ವರದಿಯಲ್ಲಿ, ಕೇಂದ್ರ ಸರ್ಕಾರವು, ಪರಿಸರ ಮೌಲ್ಯಮಾಪನಗಳನ್ನು ತಪ್ಪಿಸಿದೆ ಮತ್ತು ಅಭಿವೃದ್ಧಿಯ ಅಸಮರ್ಥತೆಯನ್ನು ಎತ್ತಿ ತೋರಿಸುವ ಪರಿಸರ ಕಾರ್ಯಕರ್ತರ ಬಾಯಿ ಮುಚ್ಚಿಸಿದೆ ಎಂದು ಹೇಳಿದೆ. ವರದಿಯು ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಕುಸಿದಿದೆ ಎಂದು ಹೇಳಿದೆ.
ಪರಿಸರ ಸಚಿವಾಲಯವು, ಕರಾವಳಿ ನಿಯಂತ್ರಣ ವಲಯ ಕ್ಲಿಯರೆನ್ಸ್, ವನ್ಯಜೀವಿ ಕ್ಲಿಯರೆನ್ಸ್, ಅರಣ್ಯ ಮತ್ತು ಪರಿಸರ ಕ್ಲಿಯರೆನ್ಸ್ ಸೇರಿದಂತೆ 12,496 ಕ್ಲಿಯರೆನ್ಸ್ ನೀಡಿದೆ. ಖಾಸಗಿ ಕೈಗಾರಿಕೋದ್ಯಮಿಗಳಿಗೆ ಲಾಭ ಮಾಡಿಕೊಡಲು ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ) ಅಧಿಸೂಚನೆ-2006, ಗಣಿ ಮತ್ತು ಖನಿಜಗಳ ಕಾಯಿದೆ- 2023 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ-1980ರಡಿಯಲ್ಲಿನ ಹಲವಾರು ಕಾನೂನುಗಳು ಮತ್ತು ನೀತಿಗಳನ್ನು ಬದಲಾಯಿಸಲಾಗಿದೆ ಎಂದು ವರದಿ ಹೇಳಿದೆ.
ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ) ಅಧಿಸೂಚನೆ-2006ಕ್ಕೆ ತಿದ್ದುಪಡಿ ಮಾಡಲಾಗಿದೆ. ಖಾಸಗಿ ಕೈಗಾರಿಕೆಗಳಿಗೆ ಅನುಕೂಲವಾಗುವ ಅನುಮತಿಗಳನ್ನು ನೀಡುವ ಮೊದಲು ಸಾರ್ವಜನಿಕ ಸಮಾಲೋಚನೆಯ ಬಗ್ಗೆ ವಿನಾಯಿತಿ ಸೇರಿದಂತೆ ಹಲವಾರು ತಿದ್ದುಪಡಿಗಳಿನ್ನು ಮಾಡಲಾಗಿದೆ ಮತ್ತು ಸಮರ್ಥನೀಯವಲ್ಲದ ಅಭಿವೃದ್ಧಿಯನ್ನು ಉತ್ತೇಜಿಸಿದೆ ಎಂದು ವರದಿ ಹೇಳಿದೆ.
ಗಣಿ ಮತ್ತು ಖನಿಜಗಳ ಕಾಯಿದೆ-2023ರ ಮೂಲಕ ಗಣಿಗಾರಿಕೆಗೆ ಖಾಸಗಿ ವಲಯಕ್ಕೆ ಪರವಾನಗಿಗಳನ್ನು ಪಡೆಯುವ ಹಾದಿ ಸರಳಗೊಳಿಸಲಾಯ್ತು. ಪೂರ್ವ ರಾಜ್ಯಗಳಾದ ಒಡಿಶಾ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ಗಳು ಗಣಿಗಾರಿಕೆಯ ಕಾರಣದಿಂದಾಗಿ ಭಾರಿ ಆಕ್ರಮಣಕ್ಕೆ ಸಾಕ್ಷಿಯಾಗಿವೆ, ಅಲ್ಲಿ ವಾಸಿಸುವ ಆದಿವಾಸಿಗಳ ಮೇಲೆ ಪರಿಣಾಮ ಬೀರಿದೆ ಮತ್ತು ನೂರಾರು ವರ್ಷಗಳ ಹಳೆಯ ಕಾಡುಗಳನ್ನು ನಾಶಪಡಿಸಲಾಗಿದೆ. 2023ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ-1980ಕ್ಕೆ ಮಾಡಿದ ತಿದ್ದುಪಡಿಯನ್ನು ವರದಿಯು ಉಲ್ಲೇಖಿಸಿದೆ, ಇದು ಅರಣ್ಯಗಳ ವ್ಯಾಖ್ಯಾನವನ್ನು ಬದಲಾಯಿಸಲು ಪ್ರಯತ್ನಿಸಿತು ಮತ್ತು ಈ ಹಿಂದೆ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಲಾದ ಹಲವಾರು ಅರಣ್ಯ ಪ್ರದೇಶಗಳಿಗೆ ಹಾನಿಕಾರಕವಾಗಿದೆ ಎಂದು ವರದಿ ಹೇಳಿದೆ.
2014 ಮತ್ತು 2020ರ ನಡುವೆ ಕೇವಲ ಒಂದು ಶೇಕಡಾಕ್ಕಿಂತ ಕಡಿಮೆ ಅರಣ್ಯ ಕ್ಲಿಯರೆನ್ಸ್‌ನ್ನು ಸರ್ಕಾರ ತಿರಸ್ಕರಿಸಿದೆ. 2014 ಮತ್ತು 2023ರ ನಡುವೆ, ಕೈಗಾರಿಕೆಗಳು ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ 1.5 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಲಾಗಿದೆ ಎಂದು ವರದಿ ಹೇಳಿದೆ.
ವರದಿಯು 2011ರ ಕರಾವಳಿ ನಿಯಂತ್ರಣ ವಲಯ (CRZ) ಅಧಿಸೂಚನೆಗೆ ಮಾಡಿದ ತಿದ್ದುಪಡಿಗಳನ್ನು ಎತ್ತಿ ತೋರಿಸಿದೆ. ವಿಮಾನ ನಿಲ್ದಾಣದ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ 130 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ನಿಯೋಜಿಸುವ ಗುರಿಯನ್ನು ಹೊಂದಿರುವ ಗ್ರೇಟ್ ನಿಕೋಬಾರ್ ಐಲ್ಯಾಂಡ್ (ಜಿಎನ್‌ಐ) ಯೋಜನೆಯಂತಹ ಯೋಜನೆಗಳನ್ನು ಆಳುವ ಸರ್ಕಾರವು ವೇಗವಾಗಿ ಮುನ್ನೆಲೆಗೆ ತಂದಿದೆ ಎಂದು ವರದಿಯು ಉಲ್ಲೇಖಿಸಿದೆ.
ಹ್ಯುಮನ್ ರೈಟ್ಸ್ ಡಿಫೆಂಡರ್ಸ್ ಅಲರ್ಟ್-ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಹೆನ್ರಿ ಟಿಫಾಗ್ನೆ ಮಾತನಾಡುತ್ತಾ, ಪರಿಸರ ಕಾರ್ಯಕರ್ತರು ಅಕ್ರಮ ಬಂಧನಗಳನ್ನು ಎದುರಿಸುತ್ತಿದ್ದಾರೆ ಮತ್ತು ಜಾರ್ಖಂಡ್, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಅವರ ಫೋನ್‌ಗಳನ್ನು ಕಿತ್ತುಕೊಂಡು ದೌರ್ಜನ್ಯ ನಡೆಸಲಾಗಿದೆ. ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಸ್ಥಾವರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆರು ಮಂದಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ 2021ರಲ್ಲಿ ದೆಹಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿಯ ಬಂಧನವನ್ನು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಉತ್ತರಪ್ರದೇಶ: 8 ಬಾರಿ ಮತದಾನದ ವಿಡಿಯೋ ವೈರಲ್; ಬಿಜೆಪಿ ಕಾರ್ಯಕರ್ತನ ಪುತ್ರ ಅರೆಸ್ಟ್


