ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಕಲ್ಕತ್ತಾ ಹೈಕೋರ್ಟ್ ಬಿಜೆಪಿಗೆ ನಿರ್ಬಂಧ ವಿಧಿಸಿದೆ, ಇದರ ಜೊತೆಗೆ ಟಿಎಂಸಿ ದೂರು ನೀಡಿದ್ದರೂ ಕ್ರಮವನ್ನು ಕೈಗೊಳ್ಳದ ಚುನಾವಣಾ ಆಯೋಗವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠ, ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿ ನೀಡುತ್ತಿರುವ ಜಾಹೀರಾತುಗಳ ವಿರುದ್ಧ ಟಿಎಂಸಿ ಸಲ್ಲಿಸಿದ ದೂರುಗಳನ್ನು ಬಗೆಹರಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.
ಸೂಕ್ತ ಸಮಯದಲ್ಲಿ ಟಿಎಂಸಿಯ ದೂರುಗಳನ್ನು ಪರಿಹರಿಸಲು ಚುನಾವಣಾ ಆಯೋಗ ಸಂಪೂರ್ಣವಾಗಿ ವಿಫಲವಾಗಿದೆ. ತತ್‌ಕ್ಷಣದ ಅರ್ಜಿಯು ಕೇವಲ ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸುವುದು ಮಾತ್ರವಲ್ಲ, ಪ್ರಾಥಮಿಕವಾಗಿ ಟಿಎಂಸಿ ಮತ್ತು ಅದರ ಕಾರ್ಯಕರ್ತರ ರಾಜಕೀಯ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಯನ್ನು ನಿರ್ಬಂಧಿಸುವುದಕ್ಕಾಗಿದೆ ಎಂದು ಹೇಳಿದೆ.
ಚುನಾವಣೆಯ ಹಿಂದಿನ ದಿನದ ಬಿಜೆಪಿಯ ಜಾಹೀರಾತುಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಮತ್ತು ಟಿಎಂಸಿ ಮತ್ತು ನಾಗರಿಕರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಕ್ಕುಗಳಿಗೆ ಧಕ್ಕೆಯುಂಟುಮಾಡಿದೆ ಎಂದು ನ್ಯಾಯಾಲಯ ಗಮನಿಸಿದೆ.
ಟಿಎಂಸಿ ವಿರುದ್ಧ ಮಾಡಲಾದ ಆರೋಪಗಳು ಖಂಡಿತವಾಗಿಯೂ ನಿಂದನಾತ್ಮಕವಾಗಿವೆ ಹಾಗೂ ಎದುರಾಳಿಗಳ ವಿರುದ್ಧ ವೈಯಕ್ತಿಕ ದಾಳಿಗಳನ್ನು ನಡೆಸಿ ಅವರನ್ನು ಅವಮಾನಿಸುವ ಉದ್ದೇಶ ಹೊಂದಿವೆ, ಆದ್ದರಿಂದ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ವಿಧಿಸುವುದಾಗಿ ನ್ಯಾಯಾಲಯ ಹೇಳಿದೆ.
ಜಾಹೀರಾತುಗಳು ಅವಹೇಳನಕಾರಿಯಾದ ವೈಯಕ್ತಿಕ ದಾಳಿಗಳನ್ನು ಒಳಗೊಂಡಿವೆ ಮತ್ತು ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಯನ್ನು ನಿರ್ಬಂಧಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ. ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಕಳಂಕ ಚುನಾವಣಾ ಪ್ರಕ್ರಿಯೆಗಾಗಿ, ಮುಂದಿನ ಆದೇಶದವರೆಗೆ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ನಿರ್ಬಂಧಿಸಿರುವುದಾಗಿ ನ್ಯಾಯಾಲಯ ಹೇಳಿದೆ.
ಚುನಾವಣಾ ಸಮಯದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ವಿರುದ್ಧ ಯಾವುದೇ ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಪ್ಪಿಸಬೇಕು ಎಂದು ನ್ಯಾಯಾಧೀಶರು ತೀರ್ಪಿನ ವೇಳೆ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂ ಪಕ್ಷದ ವಿರುದ್ಧ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತುಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ತಡೆಯಾಜ್ಞೆ ಕೋರಿ ಟಿಎಂಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ನಿಂದನಾತ್ಮಕ ಜಾಹೀರಾತುಗಳ ಬಗ್ಗೆ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರುಗಳನ್ನು ನೀಡಿದೆ, ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಟಿಎಂಸಿ ನ್ಯಾಯಾಲಯದ ಮೊರೆ ಹೋದ ಬಳಿಕವಷ್ಟೇ ಚುನಾವಣಾ ಆಯೋಗ ಬಿಜೆಪಿಗೆ ಶೋಕಾಸ್ ನೋಟಿಸ್ ನೀಡಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇದನ್ನು ಓದಿ: ಬಿಜೆಪಿ ಸರ್ಕಾರದ ನೀತಿಗಳು ಅತಿ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲು ಸಹಾಯ ಮಾಡಿದೆ: ವರದಿ


