ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್ ಸೂಚನೆಯನ್ನು ನೀಡಿದೆ.
ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ಸ್ಟಾರ್ ಪ್ರಚಾರಕರ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆ’ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದ ಸುಮಾರು ಒಂದು ತಿಂಗಳ ನಂತರ, ಭಾರತೀಯ ಚುನಾವಣಾ ಆಯೋಗವು ಇಂದು ಬಿಜೆಪಿ ಸ್ಟಾರ್ ಪ್ರಚಾರಕರಿಗೆ ಕೋಮುವಾದಿ ಭಾಷಣ ಮಾಡದಂತೆ ಸೂಚಿಸಿದೆ. ವಿರೋಧ ಪಕ್ಷದವರು ‘ಸಂವಿಧಾನವನ್ನು ರದ್ದುಗೊಳಿಸಬಹುದು’ ಎಂದು ಹೇಳುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. ಈ ಮೊದಲು ನೀಡಿದ್ದ ನೊಟೀಸ್‌ಗೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ಅಧ್ಯಕ್ಷರುಗಳು ತಮ್ಮ ಸ್ಟಾರ್ ಪ್ರಚಾರಕರನ್ನು ಸಮರ್ಥಿಸಿಕೊಂಡಿದ್ದರು.
ಜಾತಿ, ಸಮುದಾಯ, ಭಾಷೆ ಮತ್ತು ಧಾರ್ಮಿಕ ನೆಲೆಯಲ್ಲಿ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಮತ್ತು ಭಾರತದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಟ್ಟನ್ನು ಚುನಾವಣೆಗಾಗಿ ಬಲಿಪಶು ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೇಳಿದೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ದ್ವೇಷ ಭಾಷಣ ಮಾಡಿದ್ದಾರೆ ಎಂಬ ವಿರೋಧ ಪಕ್ಷದ ಆರೋಪದ ಹಿನ್ನೆಲೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಈ ಮೊದಲು ಇದೇ ರೀತಿಯ ಸೂಚನೆಗಳನ್ನು ನೀಡಿತ್ತು. ಪಕ್ಷದ ಸ್ಟಾರ್ ಪ್ರಚಾರಕರಿಗೆ ಧಾರ್ಮಿಕ ಮತ್ತು ಕೋಮು ಪ್ರಚೋದಿಸುವ ಪ್ರಚಾರದಿಂದ ದೂರವಿರುವಂತೆ ಸೂಚಿಸಿತ್ತು. ಇದಲ್ಲದೆ ಚುನಾವಣಾ ಆಯೋಗವು ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸದಂತೆ ಮತ್ತು ಸಶಸ್ತ್ರ ಪಡೆಗಳ ಸಾಮಾಜಿಕ-ಆರ್ಥಿಕ ಸಂಯೋಜನೆಯ ಬಗ್ಗೆ ಸಂಭಾವ್ಯ ವಿಭಜಕ ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್‌ಗೆ ಸೂಚಿಸಿದೆ. ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು ಮತ್ತು ಅಭ್ಯರ್ಥಿಗಳು ‘ಸಂವಿಧಾನವನ್ನು ರದ್ದುಗೊಳಿಸಬಹುದು’ ಎಂಬ ತಪ್ಪು ಅಭಿಪ್ರಾಯವನ್ನು ನೀಡುವ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಂತೆ ಕಾಂಗ್ರೆಸ್‌ಗೆ ಚುನಾವಣಾ ಆಯೋಗ ಆಗ್ರಹಿಸಿದೆ.
ತಮ್ಮ ಪಕ್ಷದ ಸ್ಟಾರ್ ಪ್ರಚಾರಕರು ತಮ್ಮ ಭಾಷಣವನ್ನು ಸರಿಪಡಿಸಲು, ಭಾಷಣ, ಹೇಳಿಕೆಗಳಲ್ಲಿ ಸಜ್ಜನಿಕೆಯನ್ನು ಕಾಪಾಡಿಕೊಳ್ಳಲು ಔಪಚಾರಿಕ ಟಿಪ್ಪಣಿಗಳನ್ನು ನೀಡುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಚು. ಆಯೋಗವು ಆಗ್ರಹಿಸಿದೆ.
ಇದನ್ನು ಓದಿ: ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ


