ನಮೂನೆ 17ಸಿ ಅಡಿ ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳ ಅಂಕಿ ಅಂಶಗಳನ್ನು ಒದಗಿಸುವುದು ಕಷ್ಟವೇನಲ್ಲ. ಆದರೆ, ಅದನ್ನು ಮಾಡಲು ಸಮಯ ಹಿಡಿಯುತ್ತದೆ ಎಂದು ಭಾರತೀಯ ಚುನಾವಣಾ ಆಯೋಗವು ಮೇ 17ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
‘ಸಮಯ ಹಿಡಿಯುತ್ತದೆ’ ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ಆಯೋಗ, “ಮತದಾನದ ಕೊನೆಯಲ್ಲಿ ಮತಗಟ್ಟೆಯ ಚುನಾವಣಾಧಿಕಾರಿ ‘ಕ್ಲೋಸ್ ಬಟನ್’ ಒತ್ತಿದ ತಕ್ಷಣ, ಇವಿಎಂನ ನಿಯಂತ್ರಣ ಘಟಕವು ಒಟ್ಟು ಚಲಾವಣೆಯಾದ ಮತಗಳ ಸಂಖ್ಯೆಯನ್ನು ತೋರಿಸುತ್ತದೆ. ಈ ಅಂಕಿ ಅಂಶವನ್ನು ನಮೂನೆ 17ಸಿ ಯ ಭಾಗ 1ರ ಐಟಂ 6ರಲ್ಲಿ ತಕ್ಷಣ ದಾಖಲಿಸಬೇಕು” ಎಂದು ಪ್ರತಿ ಮತಗಟ್ಟೆಯ ಚುನಾವಣಾಧಿಕಾರಿ ಅಥವಾ ಕ್ಷೇತ್ರದ ಚುನಾವಣಾ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಾಗಿ ನೀಡಿರುವ ಕೈಪಿಡಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಈ ನಿರ್ದೇಶನವು “ಒಂದು ಮತಗಟ್ಟೆಯಲ್ಲಿ ಮತದಾನ ಕೊನೆಗೊಂಡ ಬಳಿಕ, ಒಂದು ಬಟನ್ ಒತ್ತಿದ್ದರೆ ಚಲಾವಣೆಯಾದ ಒಟ್ಟು ಮತಗಳ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸುತ್ತದೆ. ಹೀಗಿರುವಾಗ ಅಂಕಿ ಅಂಶಗಳನ್ನು ನೀಡಲು ಚುನಾವಣಾ ಆಯೋಗ ಏಕೆ ವಿಳಂಬ ಮಾಡುತ್ತಿದೆ? ಅಂಕಿ ಅಂಶ ಒದಗಿಸಲು ಸಮಯ ಬೇಕು ಎಂದು ಸುಪ್ರಿಂ ಕೋರ್ಟ್‌ಗೆ ಏಕೆ ಸುಳ್ಳು ಹೇಳಿದೆ? ಎಂಬ ಪ್ರಶ್ನೆ ಉದ್ಬವಿಸಿದೆ.
ಚುನಾವಣಾ ಆಯೋಗ ಮತದಾನದ ಅಂಕಿ ಅಂಶಗಳನ್ನು ವಿಳಂಬವಾಗಿ ಪ್ರಕಟಿಸುತ್ತಿರುವುದರ ಬಗ್ಗೆ ಇತ್ತೀಚೆಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೈಶಿಯವರು ಅಸಮಧಾನ ವ್ಯಕ್ತಪಡಿಸಿದ್ದರು.
ಮತದಾನದ ಮಾಹಿತಿ ವಿಳಂಬಕ್ಕೆ ಯಾವುದೇ ಕಾರಣಗಳಿಲ್ಲ. ಡೇಟಾವು ನೈಜ ಸಮಯದಲ್ಲಿ ಸಿಸ್ಟಮ್‌ನಲ್ಲಿ ಲಭ್ಯವಾಗುತ್ತದೆ. ಮತದಾನ ಮುಗಿದ ಐದು ನಿಮಿಷಗಳಲ್ಲಿ ಎಲ್ಲಾ ಮಾಹಿತಿ ದೊರೆಯುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಡೇಟಾವನ್ನು ಅಂತಿಮಗೊಳಿಸಲು ಏಕೆ ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬುವುದಕ್ಕೆ ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಖುರೈಶಿ ಆಗ್ರಹಿಸಿದ್ದರು.
“ಚುನಾವಣಾ ಆಯೋಗವು ಈ ಅಂತರ ಅಥವಾ ಸಮನ್ವಯದ ಕೊರತೆ ಏಕೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಏಕೆ ಈ ರೀತಿ ನಡೆಯುತ್ತಿದೆ ಎಂದು ಆಯೋಗವು ವಿವರಿಸಬೇಕು. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ” ಎಂದು ಖುರೈಶಿ ದೈನಿಕ್ ಭಾಸ್ಕರ್‌ಗೆ ಹೇಳಿದ್ದರು.
CJI: do you disclose the percentage of votes on basis of 17C…..when you say 66% polling is that based on 17 C data?
ECI : no
CJI: what is the reservation for disclosing 17 C data?
ECI: there is no difficulty it takes time
— Live Law (@LiveLawIndia) May 17, 2024
ಬುಧವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ನಮೂನೆ 17ಸಿ ಅಡಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸಲು ನಮಗೆ ಯಾವುದೇ ಕಾನೂನು ಆದೇಶವಿಲ್ಲ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಆಯೋಗವು ಮತದಾನದ ಅಂಕಿ ಅಂಶಗಳ ಮಾಹಿತಿಯನ್ನು ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಬಿಡುಗಡೆ ಮಾಡುತ್ತಿರುವುದು “ಸ್ವಯಂಪ್ರೇರಿತ” ಎಂದಿದೆ.
ಆದರೆ, “1961ರ ಚುನಾವಣಾ ನಡವಳಿಕೆಯ ನಿಯಮಗಳ ಸೆಕ್ಷನ್ 93ರ ಪ್ರಕಾರ ಆಯೋಗವು ಮುಚ್ಚಿಡಬೇಕಾದ ಚುನಾವಣಾ ಸಂಬಂಧಿತ ದಾಖಲೆಗಳಲ್ಲಿ ನಮೂನೆ 17 ಸಿ ಒಳಗೊಂಡಿಲ್ಲ” ಎಂದು ಪಾರದರ್ಶಕ ಹಕ್ಕುಗಳ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ತಿಳಿಸಿದ್ದಾರೆ.
“1961ರ ಚುನಾವಣಾ ನಡವಳಿಕೆಯ ನಿಯಮಗಳ ಪ್ರಕಾರ, ಮತಪತ್ರಗಳು (ಬಳಸಿದ ಅಥವಾ ಬಳಸದ), ಬಳಸಿದ ಮತಪತ್ರಗಳ ಕೌಂಟರ್‌ಫಾಯಿಲ್‌ಗಳು, ಮುದ್ರಿತ ಪೇಪರ್ ಸ್ಲಿಪ್‌ಗಳು (ನಿಯಮ 57 ಸಿ), ಮತದಾರರ ಪಟ್ಟಿಯ ಗುರುತು ಮಾಡಿದ ನಕಲು ಮತ್ತು ಕೆಲವು ಇತರ ದಾಖಲೆಗಳನ್ನು ಯಾವುದೇ ಪ್ರಾಧಿಕಾರದ ಮುಂದೆ ತೆರೆಯಬಾರದು, ಪರಿಶೀಲಿಸಬಾರದು ಮತ್ತು ಸಲ್ಲಿಸಬಾರದು ಎಂದಿದೆ. ಆದರೆ, ಈ ಪೈಕಿ ನಮೂನೆ 17ಸಿ ಒಳಗೊಂಡಿಲ್ಲ. ಆದ್ದರಿಂದ ನಮೂನೆ 17 ಸಿ ಅಡಿ ಮತದಾನದ ಅಂಕಿ ಅಂಶಗಳನ್ನು ಬಹಿರಂಗೊಳಿಸಬಹುದು” ಎಂದಿದ್ದಾರೆ.
“ಇನ್ನು ಇವೆಲ್ಲದರ ಹೊರತಾಗಿ, ನಮ್ಮ ದೇಶದಲ್ಲಿ ಜನರಿಗೆ ‘ಮಾಹಿತಿಯ ಹಕ್ಕಿದೆ’ ಎಂಬುವುದನ್ನು ಚುನಾವಣಾ ಆಯೋಗ ಮರೆತಂತಿದೆ. ವಾಸ್ತವವಾಗಿ ಚುನಾವಣಾ ನಿಯಮಗಳ ನಡವಳಿಕೆಯ ನಿಯಮ 93 ಜನರು ನಮೂನೆ 17ಸಿ ಸೇರಿದಂತೆ ಚುನಾವಣಾ ದಾಖಲೆಗಳ ಪ್ರತಿಗಳನ್ನು ಪರಿಶೀಲಿಸಲು ಮತ್ತು ಪಡೆಯಲು ಅನುಮತಿಸುತ್ತದೆ. ಬಹುಶಃ ನಾವು ಆರ್‌ಟಿಐ ಕಾಯ್ದೆಯ ಪ್ರತಿಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸುವ ಅಭಿಯಾನ ನಡೆಸುವ ಅಗತ್ಯವಿದೆ” ಎಂದು ಭಾರದ್ವಾಜ್ ಹೇಳಿದ್ದಾರೆ.
Courtesy : thewire.in
ಇದನ್ನೂ ಓದಿ : ಪ್ರತಿ ಮತಗಟ್ಟೆಯ ಮತದಾನದ ಅಂಕಿ-ಅಂಶ ಒದಗಿಸಬೇಕೆಂದು ಕಾನೂನಿನಲ್ಲಿ ನಿರ್ದೇಶನವಿಲ್ಲ: ಚು.ಆಯೋಗ


