ಶನಿವಾರ (ಮೇ 25) ನಡೆದ ಲೋಕಸಭೆ ಚುನಾವಣೆ- 2024ರ 6ನೇ ಹಂತದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮ್ಮ ಸೆಲ್ಫಿ ಹಂಚಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಸೆಲ್ಫಿಯಲ್ಲಿ, ಅವರ ಹಿಂಬದಿ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ರೀತಿಯ ಪೈಂಟಿಂಗ್ ಒಂದು ಕಾಣಿಸಿದೆ. ಈ ಪೈಂಟಿಂಗ್ ಮುಂದಿಟ್ಟುಕೊಂಡು ಹಲವರು ರಾಹುಲ್ ಗಾಂಧಿಯನ್ನು ಧಾರ್ಮಿಕವಾಗಿ ಟೀಕಿಸಿದ್ದಾರೆ.
ಸದಾ ಸುಳ್ಳು ಪೋಸ್ಟ್‌ಗಳನ್ನು ಹಾಕುವಲ್ಲಿ ಪ್ರಸಿದ್ದಿ ಪಡೆದಿರುವ ಬಲಪಂಥೀಯ ಎಕ್ಸ್ ಬಳಕೆದಾರ MrSinha (mrsinha)ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಸೆಲ್ಫಿ ಹಂಚಿಕೊಂಡು ” ಜನಿವಾರದಾರಿ ಬ್ರಾಹ್ಮಣ ರಾಹುಲ್ ಗಾಂಧಿಯ ಕೋಣೆಯಲ್ಲಿ ಏಸು ಕ್ರಿಸ್ತನ ಚಿತ್ರವಿದೆ. ಆದರೆ, ಯಾವುದೇ ಹಿಂದೂ ದೇವರುಗಳ ಚಿತ್ರಗಳಿಲ್ಲ” ಎಂದು ಬರೆದುಕೊಂಡಿದ್ದಾರೆ.

Vijay Patel(@vijaygajera) ಎಂಬ ಮತ್ತೊಬ್ಬ ಎಕ್ಸ್ ಬಳಕೆದಾರ ಅದೇ ಸೆಲ್ಫಿ ಹಂಚಿಕೊಂಡು ” ಬ್ರಾಹ್ಮಣ ರಾಹುಲ್ ಗಾಂಧಿಯ ಕೋಣೆಯಲ್ಲಿ ಕ್ರೈಸ್ತ ಧರ್ಮದ ಫೋಟೋ ಇದೆ” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಅಸಲಿಗೆ ರಾಹುಲ್ ಗಾಂಧಿಯ ಸೆಲ್ಫಿಯಲ್ಲಿ ಹಿಂಬದಿ ಕಂಡು ಬಂದ ಚಿತ್ರ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದಲ್ಲ. ಅದು “ರಷ್ಯಾದ ವರ್ಣಚಿತ್ರಕಾರ ನಿಕೋಲಸ್ ರೋರಿಚ್ ಅವರು ರಚಿಸಿರುವ ‘ಮಡೋನಾ ಒರಿಫ್ಲಾಮಾ‘ ಎಂಬ ಶೀರ್ಷಿಕೆಯ ಚಿತ್ರವಾಗಿದೆ. ಚಿತ್ರದಲ್ಲಿರುವ ಮಹಿಳೆ ಶಾಂತಿಯ ಸಂದೇಶ ಸಾರುವ ಬ್ಯಾನರ್ ಹಿಡಿದಿದ್ದಾಳೆ”.

svdejala.blogspot.com ಎಂಬ ಬ್ಲಾಗ್ ಪೋಸ್ಟ್‌ನಲ್ಲಿ ಆಗಸ್ಟ್ 8, 2017ರಂದು ಈ ಕುರಿತು ಮಾಹಿತಿ ಪ್ರಕಟಿಸಿಲಾಗಿದೆ. ಅದರಲ್ಲಿ ಹೇಳಿರುವ ಪ್ರಕಾರ, ಈ ಚಿತ್ರವನ್ನು ನಿಕೋಲಸ್ ರೋರಿಚ್ ಅವರು 1932 ರಲ್ಲಿ ರಚಿಸಿದ್ದಾರೆ. ಚಿತ್ರದಲ್ಲಿ ಮಹಿಳೆ ಹಿಡಿದಿರುವ ಮೂರು ಚುಕ್ಕೆಗಳಿರುವ ಬ್ಯಾನರ್ ಅನ್ನು ‘ಬ್ಯಾನರ್ ಆಫ್ ಪೀಸ್’ (Banner of peace)ಎಂದು ಕರೆಯಲಾಗುತ್ತದೆ.

ಗೂಗಲ್‌ನಲ್ಲಿ ‘ಮಡೋನಾ ಒರಿಫ್ಲಾಮಾ’ (Madonna Oriflamma) ಎಂದು ಹುಡುಕಿದರೆ ಚಿತ್ರದ ಕುರಿತು ಸಾಕಷ್ಟು ಮಾಹಿತಿ ಲಭ್ಯವಿದೆ.
ವಿಕಿಆರ್ಟ್ ಪುಟದಲ್ಲಿ 2013 ರಲ್ಲಿ ಕೊನೆಯದಾಗಿ ಅಪ್ಡೇಟ್ ಮಾಡಲಾದ ಮಾಹಿತಿಯ ಪ್ರಕಾರ, ಈ ಚಿತ್ರವನ್ನು ನ್ಯೂಯಾರ್ಕ್‌ನ ನಿಕೋಲಸ್ ರೋರಿಚ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ ಎಂದಿದೆ.

ನಿಕೋಲಸ್ ರೋರಿಚ್ ಮ್ಯೂಸಿಯಂನ ಫೇಸ್‌ಬುಕ್ ಪುಟದಲ್ಲಿ 2021 ರಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು.
ನಾವು ನಡೆಸಿದ ಪರಿಶೀಲನೆಯಲ್ಲಿ ರಾಹುಲ್ ಗಾಂಧಿಯ ಸೆಲ್ಫಿಯಲ್ಲಿ ಹಿಂಬದಿ ಕಾಣುತ್ತಿರುವ ಚಿತ್ರ ಏಸು ಕ್ರಿಸ್ತರದ್ದೋ, ಮೇರಿ ಮಾತೆಯದ್ದೋ ಅಲ್ಲ. ಅದು ಶಾಂತಿಯ ಸಂದೇಶ ಸಾರುವ ‘ಮಡೋನಾ ಒರಿಫ್ಲಾಮಾ’ ಚಿತ್ರ ಎಂಬುವುದು ಗೊತ್ತಾಗಿದೆ. ಹಾಗಾಗಿ, ಎಕ್ಸ್ ಬಳಕೆದಾರರು ಮಾಡಿರುವ ಪ್ರತಿಪಾದನೆ ಸುಳ್ಳು.
ಇದನ್ನೂ ಓದಿ : FACT CHECK : ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸಿದ ದೃಶ್ಯ ಕೇರಳದ್ದಲ್ಲ


