ವ್ಯಕ್ತಿಯೊಬ್ಬ ಧ್ವನಿ ಬದಲಾಯಿಸುವ ಆ್ಯಪ್ ಬಳಸಿ, ಶಿಕ್ಷಕಿಯಂತೆ ಬಿಂಬಿಸಿಕೊಂಡು ಏಳು ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಪ್ರಕರಣ ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯರ ಪೈಕಿ ಬಹುತೇಕರು ಬುಡಕಟ್ಟು ಸಮುದಾಯದವರು ಎಂದು ವರದಿಗಳು ಹೇಳಿವೆ.
ಪ್ರಕರಣ ಸಂಬಂಧ ಪೊಲೀಸರು 30 ವರ್ಷದ ಕಾರ್ಮಿಕ ಬ್ರಜೇಶ್ ಪ್ರಜಾಪತಿ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆದೇಶದ ಮೇರೆಗೆ ರಚಿಸಲಾದ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.
ಐವರು ಸಂತ್ರಸ್ತೆಯರನ್ನು ಒಳಗೊಂಡ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಪೈಕಿ ನಾಲ್ವರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಬಾಲಕಿಯರಲ್ಲಿ ಒಬ್ಬಳು ಅಪ್ರಾಪ್ತೆ ಎಂದು ಸಿಧಿಯ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ವರ್ಮಾ ಹೇಳಿದ್ದಾರೆ.
ಸಿಧಿಯ ಮಜೌಲಿ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್‌ಗಳಾದ 376 (2) (ಎನ್), 354,506,342,366, ಮತ್ತು 294ರ ಅಡಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಪ್ರಕರಣದಲ್ಲಿ 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 3/4 ಅನ್ನು ಅನ್ವಯಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ನಾಲ್ವರು ಬುಡಕಟ್ಟು ವಿದ್ಯಾರ್ಥಿನಿಯರಲ್ಲದೆ, ಇತರ ಮೂವರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್‌ಐಟಿಯ ಭಾಗವಾಗಿರುವ ಮಜೌಲಿ ಪೊಲೀಸ್ ಠಾಣೆಯ ಉಸ್ತುವಾರಿ ದೀಪಕ್ ಬಾಘೇಲ್ ಹೇಳಿದ್ದಾರೆ.
ಬ್ರಜೇಶ್ ಪ್ರಜಾಪತಿ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿದ್ದು, ಸಂದೀಪ್ ಪ್ರಜಾಪತಿ, ರಾಹುಲ್ ಪ್ರಜಾಪತಿ, ಮತ್ತು ಲವ್ಕುಶ್ ಪ್ರಜಾಪತಿ ಆತನಿಗೆ ಸಹಾಯ ಮಾಡಿದ್ದಾರೆ ಎಂದು ಎಸ್‌ಐಟಿಯ ನೇತೃತ್ವ ವಹಿಸಿರುವ ಡಿಎಸ್‌ಪಿ ರೋಶ್ನಿ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಅತ್ಯಾಚಾರದ ಬಳಿಕ ಆರೋಪಿಗಳು ವಿದ್ಯಾರ್ಥಿನಿಯರಿಂದ ಮೊಬೈಲ್ ಫೋನ್ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 16 ಮೊಬೈಲ್ ಫೋನ್‌ಗಳು ಮತ್ತು ಹಲವಾರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
ಪ್ರಕರಣದ ವಿವರಣೆ: ಆರೋಪಿಗಳಲ್ಲಿ ಒಬ್ಬನಾದ ಲವ್ಕುಶ್ ಪ್ರಜಾಪತಿ ಎರಡು ವರ್ಷಗಳ ಹಿಂದೆಯಷ್ಟೆ ಪದವಿ ಮುಗಿಸಿದ್ದ. ಆದ್ದರಿಂದ ಆತ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪಿನಲ್ಲಿದ್ದ. ಅಲ್ಲಿಂದ ಒಬ್ಬಳು ವಿದ್ಯಾರ್ಥಿನಿಯ ಫೋನ್ ನಂಬರ್ ಅನ್ನು ಪ್ರಮುಖ ಆರೋಪಿ ಬ್ರಜೇಶ್ ಪ್ರಜಾಪತಿಗೆ ನೀಡಿದ್ದ. ಆತ ವಿದ್ಯಾರ್ಥಿನಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ಬಳಿಕ ಆ ವಿದ್ಯಾರ್ಥಿನಿಯ ಮೊಬೈಲ್ ಕಸಿದುಕೊಂಡು ಇತರ ವಿದ್ಯಾರ್ಥಿನಿಯರ ನಂಬರ್ ಪಡೆದುಕೊಂಡಿದ್ದ.
ಯೂಟ್ಯೂಬ್ ನೋಡಿ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಗ್ಗೆ ತಿಳಿದುಕೊಂಡಿದ್ದ ಬ್ರಜೇಶ್ ಪ್ರಜಾಪತಿ, ಆ ಆ್ಯಪ್ ಅನ್ನು ತನ್ನ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದ. ಅದರ ಸಹಾಯದಿಂದ ಮಹಿಳೆಯರಂತೆ ಧ್ವನಿ ಬದಲಾಯಿಸಿ ವಿದ್ಯಾರ್ಥಿನಿಯರಿಗೆ ಕರೆ ಮಾಡುತ್ತಿದ್ದ. ತನ್ನನ್ನು ತಾನು ‘ರಂಜನಾ ಮೇಡಂ ಎಂದು ಹೇಳಿಕೊಂಡಿದ್ದ. 18 ವರ್ಷದ ಕಳೆದ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಸರ್ಕಾರದಿಂದ ಸ್ಕಾಲರ್ ಶಿಪ್ ಇದೆ ಎಂದು ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದ. ತನ್ನ ಬಳಿಗೆ ಬಂದ ವಿದ್ಯಾರ್ಥಿನಿಯರಿಗೆ ತಾನು ರಂಜನಾ ಮೇಡಂ ಮಗ ಎಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. ವಿದ್ಯಾರ್ಥಿನಿಯರ ಮುಖತಃ ಭೇಟಿಯ ವೇಳೆ ಆರೋಪಿ ಬಟ್ಟೆ ಅಥವಾ ಹೆಲ್ಮೆಟ್‌ನಿಂದ ಮುಖ ಮುಚ್ಚಿಕೊಳ್ಳುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ವರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶ : ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಗೃಹ ಬಂಧನ ಆರೋಪ


