ಜನವರಿ 5 ರಂದು ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯ ತಂಡದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಇತರ ಆರು ಮಂದಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಈ ಪ್ರಕರಣದಲ್ಲಿ ಸಂಸ್ಥೆ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ನಡೆದ ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಶೇಖ್‌ನ ಮನೆ ಮೇಲೆ ದಾಳಿ ನಡೆಸಲು ಇಡಿ ತಂಡ ತೆರಳಿದ್ದ ವೇಳೆ 1,000 ಜನರ ಗುಂಪೊಂದು ದಾಳಿ ನಡೆಸಿತ್ತು.
ಹಗರಣದಲ್ಲಿ ಬಂಧಿತರಾಗಿರುವ ರಾಜ್ಯದ ಮಾಜಿ ಆಹಾರ ಸಚಿವೆ ಜ್ಯೋತಿ ಪ್ರಿಯಾ ಮಲ್ಲಿಕ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇರೆಗೆ ತಂಡವು ಶೇಖ್ ಅವರನ್ನು ಬಂಧಿಸಲು ಹೋಗಿತ್ತು ಎಂದು ಅವರು ಹೇಳಿದರು.
ಕೋಲ್ಕತ್ತಾದಿಂದ 80 ಕಿಮೀ ದೂರದಲ್ಲಿರುವ ಸಂದೇಶ್‌ಖಾಲಿ ಎಂಬ ನದಿತೀರದ ದ್ವೀಪವು ಮೀನು ಸಾಕಾಣಿಕೆ, ವ್ಯಾಪಾರದಲ್ಲಿ ತೊಡಗಿರುವ ಶೇಖ್ ಮತ್ತು ಬೆಂಬಲಿಗರು ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ ನಂತರ ದೇಶದಾದ್ಯಂತ ಸುದ್ದಿಯಾಗಿತ್ತು.
ಜನವರಿ 5 ರಂದು ನಡೆದ ಘಟನೆಗಳಿಗೆ ಸಂಬಂಧಿಸಿದ ಮೂರು ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಅವರು ಹೇಳಿದರು. ಫೆಬ್ರವರಿ 29 ರಂದು ರಾಜ್ಯ ಪೊಲೀಸರು ಶೇಖ್ ಅವರನ್ನು ಬಂಧಿಸಿದ್ದರು ಮತ್ತು ಮಾರ್ಚ್ 6 ರಂದು ಸಿಬಿಐ ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಂಡಿತು ಎಂದು ಅವರು ಹೇಳಿದರು.
ಬಿಜೆಪಿ ನಡೆಸಿದ ಷಡ್ಯಂತ್ರ ಎಂದ ಟಿಎಂಸಿ:
ಸಂದೇಶಖಾಲಿ ಪ್ರದೇಶದ ಬಿಜೆಪಿ ಮುಖಂಡರದ್ದು ಎನ್ನಲಾದ ಸ್ಟಿಂಗ್ ಆಪರೇಷನ್ ವಿಡಿಯೊ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್, ಇದು ಬಿಜೆಪಿ ನಡೆಸಿದ ಷಡ್ಯಂತ್ರ ಎಂದು ಆರೋಪ ಮಾಡಿದೆ. ಮಹಿಳೆಯರಿಂದ ಖಾಲಿ ಪತ್ರಕ್ಕೆ ಸಹಿ ಮಾಡಿಸಿಕೊಂಡು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದೆ.


