ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ದೆಹಲಿಯ ಮುಂಗೇಶ್‌ಪುರದ ಹವಾಮಾನ ಕೇಂದ್ರವು ಮಧ್ಯಾಹ್ನ 2.30ಕ್ಕೆ 52.3 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಭಾರತದ ಇದುವರೆಗಿನ ಅತ್ಯಂತ ಬಿಸಿಯಾದ ದಿನವನ್ನು ದಾಖಲಿಸಿದೆ. ಭಾರತದಲ್ಲಿ ಇದುವರೆಗೆ ದಾಖಲಾದ ಅತ್ಯಧಿಕ ತಾಪಮಾನ ಇದಾಗಿದೆ.
ದೆಹಲಿಯಲ್ಲಿ ಇಂದು ತಾಪಮಾನವು ನಿರೀಕ್ಷೆಗಿಂತ 9 ಡಿಗ್ರಿಗಿಂತ ಹೆಚ್ಚಿತ್ತು, 2002ರಲ್ಲಿ ಅತಿಹೆಚ್ಚು ಎಂದರೆ ದಾಖಲೆಯ 49.2 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿತ್ತು. ಇಂದಿನ ತಾಪಮಾನವು 52.3 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಈ ದಾಖಲೆಯನ್ನು ಮೀರಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ತಾಪಮಾನದ ಹೆಚ್ಚಳದ ಹಿನ್ನೆಲೆ ದೆಹಲಿಗೆ ರೆಡ್ ಅಲರ್ಟ್ ಆರೋಗ್ಯ ಸೂಚನೆಯನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಅಂದಾಜು 30 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಇದ್ದು, ದುರ್ಬಲ ಜನರು ಸೇರಿದಂತೆ ಎಲ್ಲಾ ವಯಸ್ಸಿನ ಜನರ ಬಗೆಗೆ ತೀವ್ರ ಕಾಳಜಿಯ ಅಗತ್ಯವಿದೆ ಎಂದು ಎಚ್ಚರಿಸಿದೆ.
ಭಾರತದಲ್ಲಿ ಬೇಸಿಗೆಯ ಉಷ್ಣತೆಯಲ್ಲಿ ಹೆಚ್ಚಳವು ಹೊಸದೇನಲ್ಲ, ಆದರೆ ವೈಜ್ಞಾನಿಕ ಸಂಶೋಧನೆಯು ಹವಾಮಾನ ಬದಲಾವಣೆಯು ಶಾಖದ ಅಲೆಗಳು ಹೆಚ್ಚು ತೀವ್ರವಾಗಲು ಕಾರಣವಾಗುತ್ತದೆ ಎಂದು ಕಂಡು ಹಿಡಿದಿದೆ. ಬಿಸಿಲಿನ ತಾಪಮಾನದ ಹೆಚ್ಚಳದಿಂದಾಗಿ ದೆಹಲಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದ್ದು, 8,302 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ. ವಿದ್ಯುತ್‌ಗೆ ಸಾರ್ವಕಾಲಿಕವಾಗಿ ಬೇಡಿಕೆ ಹೆಚ್ಚಳವಾಗಿದೆ, ಬಿಸಿಲ ಬೇಗೆಗೆ ಜನರು ಹವಾ ನಿಯಂತ್ರಿತ ಉಪಕರಣಗಳ ಮೊರೆ ಹೋಗಿದ್ದಾರೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯನ್ನು ಹೊರತುಪಡಿಸಿದರೆ ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ವರದಿಯಾಗಿದೆ. ಅಲ್ಲಿ 51 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದಕ್ಷಿಣ ರಾಜಸ್ಥಾನದ ಬಾರ್ಮರ್, ಜೋಧ್‌ಪುರ್, ಉದಯಪುರ, ಸಿರೋಹಿ ಮತ್ತು ಜಲೋರ್ ಜಿಲ್ಲೆಗಳಲ್ಲಿ ಇಂದು ತಾಪಮಾನದಲ್ಲಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ದಾಖಲಾಗಿದೆ. ಇದು ವಾಯುವ್ಯ ಭಾರತದಲ್ಲಿ ಶಾಖದ ಅಲೆಗಳ ಕುಸಿತದ ಆರಂಭವನ್ನು ಸೂಚಿಸುತ್ತದೆ. NWP ದತ್ತಾಂಶವು, ಗುರುವಾರದಿಂದ ಬಂಗಾಳಕೊಲ್ಲಿಯಿಂದ ತೇವಾಂಶವುಳ್ಳ ಗಾಳಿಯು ಬೀಸಲಿದ್ದು, ಉತ್ತರ ಪ್ರದೇಶದ ಗರಿಷ್ಠ ತಾಪಮಾನದಲ್ಲಿ ಕ್ರಮೇಣ ಇಳಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.
ಇದನ್ನು ಓದಿ: ಮಧ್ಯಪ್ರದೇಶ: ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವನಿಗೆ ಥಳಿಸಿ ಮೂತ್ರ ಕುಡಿಯುವಂತೆ ಬಲವಂತ


