ಕುಪ್ವಾರ ಪೊಲೀಸ್ ಠಾಣೆಯ ಮೇಲೆ ಹಿಂಸಾತ್ಮಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಸೇನಾ ಲೆಫ್ಟಿನೆಂಟ್ ಕರ್ನಲ್‌ಗಳು ಸೇರಿ ಒಟ್ಟು 16 ಸೈನಿಕರ ವಿರುದ್ಧ ಕೊಲೆ ಯತ್ನ ಮತ್ತು ಡಕಾಯಿತಿ ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಮಂಗಳವಾರ ಪೊಲೀಸರು ಕುಪ್ವಾರ ಜಿಲ್ಲೆಯ ಬಟ್ಪೋರ ಎಂಬಲ್ಲಿ ಟೆರಿಟೋರಿಯಲ್ ಸೇನೆಯ ಸೈನಿಕರೊಬ್ಬರ ಮನೆಯ ಮೇಲೆ ಮಾದಕವಸ್ತು ಪ್ರಕರಣವೊಂದರ ತನಿಖೆ ಭಾಗವಾಗಿ ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಸೈನಿಕರು ಅದೇ ದಿನ ರಾತ್ರಿ ಸುಮಾರು 9.40ಕ್ಕೆ ಠಾಣೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಟೆರಿಟೋರಿಯಲ್ ಆರ್ಮಿಯ ಶಸ್ತ್ರಸಜ್ಜಿತ ಮತ್ತು ಸಮವಸ್ತ್ರಧಾರಿ ಸಿಬ್ಬಂದಿಗಳ ಗುಂಪು, ಸೇನೆಯ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಪೊಲೀಸ್ ಠಾಣೆಗೆ ದಾಳಿ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರಾದೇಶಿಕ ಸೇನೆಯು ಭಾರತೀಯ ಸೇನೆಗೆ ಬೆಂಬಲ ಒದಗಿಸುವ ಅರೆಕಾಲಿಕ ಸ್ವಯಂಸೇವಕರನ್ನು ಒಳಗೊಂಡಿರುವ ಮಿಲಿಟರಿ ಮೀಸಲು ಪಡೆಯಾಗಿದೆ.
ಸೇನಾ ಲೆಫ್ಟಿನೆಂಟ್ ಕರ್ನಲ್ ಅಂಕಿತ್ ಸೂದ್, ರಾಜೀವ್ ಚೌಹಾಣ್ ಮತ್ತು ನಿಖಿಲ್ ನೇತೃತ್ವದ ಸಶಸ್ತ್ರ ಗುಂಪು ಪೊಲೀಸ್ ಠಾಣೆಯ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಿ ಅಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಪೊಲೀಸ್ ಅಧಿಕಾರಿಗಳಾದ ರಯೀಸ್ ಖಾನ್, ಇಮ್ತಿಯಾಜ್ ಮಲಿಕ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸಲೀಮ್ ಮುಷ್ತಾಕ್, ಜಹೂರ್ ಅಹ್ಮದ್ ಗಾಯಗೊಂಡಿದ್ದಾರೆ. ಗಾಯಗೊಂಡ ಪೊಲೀಸ್ ಅಧಿಕಾರಿಗಳಿಂದ ಮೊಬೈಲ್ ಫೋನ್‌ಗಳನ್ನು ಸೇನಾ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ಸ್ಥಳದಿಂದ ಪರಾರಿಯಾಗುವ ಮೊದಲು ಪೊಲೀಸ್ ಪೇದೆ ಗುಲಾಂ ರಸೂಲ್ ಅವರನ್ನು ಅಪಹರಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯು ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಅಪರಾಧಿಗಳ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲು ಸಹಾಯ ಮಾಡಿದೆ. ಆರೋಪಿ ಸೇನಾ ಸಿಬ್ಬಂದಿಗಳ ವಿರುದ್ಧ ಸೆಕ್ಸನ್ 186(ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 332 (ಸಾರ್ವಜನಿಕ ಸೇವಕರನ್ನು ಅವರ ಕರ್ತವ್ಯದಿಂದ ತಡೆಯಲು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 307(ಕೊಲೆಯ ಯತ್ನ), 342 ಮತ್ತು 147 (ಗಲಭೆಗೆ ಶಿಕ್ಷೆ), 392 (ದರೋಡೆಗೆ ಶಿಕ್ಷೆ), 397 ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಸನ್‌ಗಳಡಿಯಲ್ಲಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ತನಿಖೆಯನ್ನು ಕುಪ್ವಾರ ಉಪ ಪೊಲೀಸ್ ವರಿಷ್ಠಾಧಿಕಾರಿ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲಿ ಪ್ರತಿಕ್ರಿಯಿಸಿದ್ದ ಶ್ರೀನಗರ ಮೂಲದ ರಕ್ಷಣಾ ವಕ್ತಾರರು ಘಟನೆಯನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದು, ಪೊಲೀಸರು ಮತ್ತು ಸೇನಾ ಸಿಬ್ಬಂದಿಗಳ ಘರ್ಷಣೆಯ ಸುದ್ದಿ ಸುಳ್ಳು ಎಂದು ಹೇಳಿದ್ದರು. ಕಾರ್ಯಾಚರಣೆಯ ವಿಷಯದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪ್ರಾದೇಶಿಕ ಸೇನಾ ಘಟಕದ ನಡುವಿನ ಸಣ್ಣ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹೇಳಿದ್ದರು.
ಇದನ್ನು ಓದಿ: ಮತದಾರರನ್ನು ಇವಿಎಂ ಬಳಿ ತೆರಳಲೇ ಬಿಡುತ್ತಿರಲಿಲ್ಲ! ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ಆರೋಪ


