“ಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ… ಇದು ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನಪ್ರಾಣ ಕುಟುಂಬವನ್ನು ಪಣಕಿಟ್ಟು ಸಂಸದನೊಬ್ಬ ನಡೆಸಿರುವ ಕಾಮಕೃತ್ಯ” ಎಂದು ಹೋರಾಟಗಾರ್ತಿ ರೂಪಾ ಹಾಸನ ಹೇಳಿದರು.
ಹಾಸನದಲ್ಲಿ ನಡೆದ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಕೃತ್ಯವನ್ನು ವಿಡಿಯೋ ಮಾಡಿದ್ದು, ತನ್ನ ನಿರ್ಲಕ್ಷ್ಯದಿಂದ ಮತ್ತೊಬ್ಬರಿಗೆ ಸಿಗುವಂತೆ ಮಾಡಿದ್ದು, ಹಾಗೂ ಚುನಾವಣಾ ದಾಳವಾಗಿ ಬಳಸಿಕೊಂಡು ಹಂಚಿದವರು, ಆ ವಿಡಿಯೋಗಳನ್ನು ಇಟ್ಟುಕೊಂಡು ಬೇಕಾದಂತೆ ಬಳಸಿಕೊಂಡವರು.. ಹೀಗೆ ಎಲ್ಲ ಹಂತಗಳನ್ನು ಖಂಡಿಸಬೇಕಿದೆ” ಎಂದರು.
“ಎಷ್ಟೆಲ್ಲ ಹಂತಗಳಲ್ಲಿ ವಿಡಿಯೋ ಹರಿಬಿಡಲಾಗ್ತಿದೆ ಅನ್ನೋದು ಇಲ್ಲಿನ ಹೋರಾಟಗಾರರು, ಜನತೆಗೆ ಗೊತ್ತಿದೆ. ಇಲ್ಲಿನ ಹೆಣ್ಣುಮಕ್ಕಳ ಸಮಾದಿ ಕಟ್ಟಲಾಗುತ್ತಿದ್ದು, ಹೆಣ್ಣುಮಕ್ಕಳ ಜರ್ಜರಿತರಾಗಿ ಸ್ಥಿತಿಯನ್ನು ನೋಡಿ ನೊಂದಿದ್ದೇವೆ. ಅತ್ಯಂತ ತಳಸಮುದಾಯದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರಜ್ವಲ್ ತನ್ನ ಕಾಮಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಹಾಗಾಗಿ, ನಿಮ್ಮೊಂದಿಗೆ ನಾವಿದ್ದೇವೆ, ನೊಂದ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್ಐಟಿ ಮುಂದೆ ನಿಮ್ಮ ದೂರು ದಾಖಲಿಸಿ” ಎಂದು ಕರೆ ನೀಡಿದರು.
ಸರ್ಕಾರಗಳೇ ಜವಾಬ್ದಾರಿಯಿಂದ ವರ್ತಿಸಿ
“ಪ್ರಕರಣ ಬೆಳಕಿಗೆ ಬಂದು ಐದು ವಾರಗಳಾದರು ಇನ್ನೂ ಪ್ರಜ್ವಲ್ ರೇವಣ್ಣನನ್ನು ರಕ್ಷಿಸುತ್ತಿರುವ ರಾಜ್ಯ ಕೇಂದ್ರ ಸರ್ಕಾರಗಳು, ಪರಸ್ಪರ ಕೆಸರೆರಚಾಟ ನಡೆಸುತ್ತಿರು ರಾಜಕೀಯ ನಾಯಕರು ಅದನ್ನು ನಿಲ್ಲಿಸಿ ಇನ್ನಾದರೂ ಅದನ್ನೆಲ್ಲ ನಿಲ್ಲಿಸಿ. ತಕ್ಷಣ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ. ಅಲ್ಲದೆ, ಇಂದಿಗೂ ಈ ಕ್ಷಣಕ್ಕೂ ವಿಡಿಯೋ ಹರಿಬಿಡುತ್ತಿರುವವರನ್ನು ಎಡೆಮುರಿಕಟ್ಟಿ, ಪ್ರಕರಣಕ್ಕೆ ಅಂತ್ಯ ಹಾಡಿ. ಇಲ್ಲದಿದ್ದರೆ ಸರ್ಕಾರಗಳ ಮೇಲೆ ನಂಬಿಕೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದರು.
“ನಿಮ್ಮ ರಾಜಕೀಯ ನಿಲ್ಲಿಸಿ, ಹೆಣ್ಣುಮಕ್ಕಳ ಸಮಾಧಿಯ ಮೇಲೆ ಭವ್ಯ ಬಂಗಲೆ ಕಟ್ಟುತ್ತಿರುವುದನ್ನು ನಿಲ್ಲಿಸಿ. ಸರ್ಕಾರಗಳು ಇನ್ನಾದರೂ ಜವಾಬ್ದಾರಿಯಿಂದ ವರ್ತಿಸದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ಮತ್ತೊಂದು ರೀತಿಯ ಗಟ್ಟಿತನದ ಹೋರಾಟವನ್ನು ಕಟ್ಟಬೇಕಾಗುತ್ತದೆ” ಎಂದು ರೂಪಾ ಎಚ್ಚರಿಕೆ ನೀಡಿದರು.
ಇದನ್ನೂ ಓದಿ; ದೇವೇಗೌಡರೆ ನೈತಿಕತೆ ಇದ್ರೆ ರಾಜಕೀಯ ನಿವೃತ್ತಿ ಘೋಷಿಸಿ..: ಸಿದ್ದನಗೌಡ ಪಾಟೀಲ್


