ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್ ಕೇಶವಪ್ರಸಾದ್ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಿತ್ತು. ಹೀಗಾಗಿ, ಸಿದ್ದರಾಮಯ್ಯ ಮತ್ತು ಡಿಕೆಶಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ರಾಹುಲ್ ಗಾಂಧಿ ವಿಚಾರಣೆ ಹಾಜರಾಗಲು ವಿನಾಯಿತಿ ಕೇಳಿದ್ದಾರೆ.
ವರದಿಗಳ ಪ್ರಕಾರ, ನ್ಯಾಯಾಧೀಶರು ಆರೋಪಿಗಳ ಹಾಜರಿಯನ್ನು ದಾಖಲಿಸಿಕೊಂಡು ನಗದು ಶ್ಯೂರಿಟಿ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದ್ದಾರೆ. ಬಾಂಡ್ ಪತ್ರಗಳಿಗೆ ಸಹಿ ಹಾಕಿಸಿ ಕಳುಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ : 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ ರಾಜ್ಯ ಕಾಂಗ್ರೆಸ್, ‘ಆಡಳಿತರೂಢ ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಸರ್ಕಾರ. ಇದು ಕಳೆದ ನಾಲ್ಕು ವರ್ಷಗಳಲ್ಲಿ 1.50 ಲಕ್ಷ ಕೋಟಿ ರೂಪಾಯಿ ಲೂಟಿ ಹೊಡೆದಿರುವ ಭ್ರಷ್ಟ ಸರ್ಕಾರ ಎಂದು ಆರೋಪಿಸಿತ್ತು’. ಈ ಸಂಬಂಧ ಬಿಜೆಪಿ ಕಾರ್ಯದರ್ಶಿ ದೂರು ದಾಖಲಿಸಿದ್ದರು.
ರಾಹುಲ್ ಗಾಂಧಿ ಗೈರು :
ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಆರೋಪಿಯಾದರೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಕ್ರಮವಾಗಿ 2,3 ಮತ್ತು 4ನೇ ಆರೋಪಿಗಳಾಗಿದ್ದಾರೆ. ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ನಿತಿಶ್ ಶೆಟ್ಟಿ, ರಾಹುಲ್ ಹಾಜರಿಗೆ ವಿನಾಯಿತಿ ಕೋರಿದರು. ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಹಾಜರಿಗೆ ವಿನಾಯಿತಿ ಕೋರಿರುವ ಅರ್ಜಿಯ ಊರ್ಜಿತದ ಬಗ್ಗೆ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ : ಪೊಲೀಸರಿಗೆ ಬೆದರಿಕೆ ಪ್ರಕರಣ: ಶಾಸಕ ಹರೀಶ್ ಪೂಂಜಾರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್


