ಎಕ್ಸಿಟ್ ಪೋಲ್‌ಗಳು ಎರಡು ತಿಂಗಳ ಹಿಂದೆ ಮನೆಯಲ್ಲೇ ಕುಳಿತು ತಯಾರಿಸಲ್ಪಟ್ಟಿರುವುದರಿಂದ ಅದು ಯಾವುದೇ ವಾಸ್ತವತೆಯನ್ನು ಹೊಂದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿಗೆ ಬಹುಮತ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ಎಕ್ಸಿಟ್ ಪೋಲ್‌ಗಳು ಎರಡು ತಿಂಗಳ ಹಿಂದೆ ಮನೆಯಲ್ಲಿ ಕುಳಿತು ತಯಾರಿಸಲ್ಪಟ್ಟವು. 2016, 2019 ಮತ್ತು 2021ರಲ್ಲಿ ಎಕ್ಸಿಟ್ ಪೋಲ್‌ಗಳನ್ನು ಹೇಗೆ ನಡೆಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಯಾವುದೇ ಎಕ್ಸಿಟ್ ಪೋಲ್‌ಗಳು ನಿಜವಾಗಲಿಲ್ಲ ಎಂದು ಹೇಳಿದ್ದಾರೆ.
ಈ ಎಕ್ಸಿಟ್ ಪೋಲ್‌ಗಳನ್ನು ಕೆಲವು ಜನರು ಎರಡು ತಿಂಗಳ ಹಿಂದೆ ಮಾಧ್ಯಮ ಬಳಕೆಗಾಗಿ ಮನೆಯಲ್ಲಿ ಕುಳಿತು ತಯಾರಿಸಿದ್ದಾರೆ. ಅವುಗಳಿಗೆ ಯಾವುದೇ ಮೌಲ್ಯವಿಲ್ಲ. ತಮ್ಮ ರ್ಯಾಲಿಗಳಲ್ಲಿನ ಜನರ ಪ್ರತಿಕ್ರಿಯೆಯು ಉತ್ತಮವಾಗಿತ್ತು. ಆದ್ದರಿಂದ ಮಾಧ್ಯಮ ಸಂಸ್ಥೆಗಳ ಎಕ್ಸಿಟ್ ಪೋಲ್ ಫಲಿತಾಂಶಗಳ ಅಂದಾಜುಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಕೋಟಾಗಳನ್ನು ಮುಸ್ಲಿಮರು ಕಸಿದುಕೊಳ್ಳುತ್ತಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಬಿಜೆಪಿ ಧ್ರುವೀಕರಿಸಲು ಮತ್ತು ಹರಡಲು ಪ್ರಯತ್ನಿಸಿದ ರೀತಿ ನೋಡಿದರೆ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುವುದಿಲ್ಲ ಮತ್ತು ಸಿಪಿಐ(ಎಂ) ಮತ್ತು ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ ಸಾಧನೆ ಮಾಡಲಿವೆ. ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಎಂ ಕೆ ಸ್ಟಾಲಿನ್ ಮತ್ತು ಉದ್ಧವ್ ಠಾಕ್ರೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಭಾರತೀಯ ಜನತಾ ಪಕ್ಷದ ಪ.ಬಂಗಾಳ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 25 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ನಾನು ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ 25ರ ಗಡಿ ದಾಟುತ್ತೇವೆ ಎಂದು ಹೇಳಿದ್ದೆ, ಆದರೆ ನನ್ನ ಪಕ್ಷದ ಹಲವರು ನನ್ನ ಮಾತನ್ನು ನಂಬಲಿಲ್ಲ. ಈಗ ನನ್ನ ಪಕ್ಷ, ಮಾದ್ಯಮಗಳು ಮತ್ತು ರಾಜ್ಯದ ಜನರು ನಾವು 25ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ನಂಬಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಉತ್ತರಪ್ರದೇಶ: 7ನೇ ಹಂತದ ಮತದಾನದ ದಿನ ಉಷ್ಣಾಘಾತದಿಂದ 33 ಚುನಾವಣಾ ಸಿಬ್ಬಂದಿ ಸಾವು


