ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ದ 74,755 ಮತಗಳ ಅಂತರದಲ್ಲಿ ಕಂಗನಾ ಗೆಲುವು ಖಂಡಿದ್ದು, ವಿಕ್ರಮಾದಿತ್ಯ ಸಿಂಗ್ 4,62,267 ಮತಗಳನ್ನು ಪಡೆದರೆ, ಕಂಗನಾ 5,37,022 ಮತಗಳನ್ನು ಗಳಿಸಿದ್ದಾರೆ.
ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರರಾಗಿರುವ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ದ ಸಿನಿಮಾ ನಟಿಯಾಗಿರುವ ಕಂಗನಾ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಲೇ ಗೆದ್ದು ಬೀಗಿದ್ದಾರೆ.
34 ವರ್ಷದ ಸಿಂಗ್, ಈ ಹಿಂದೆ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಸಂಸತ್ ಚುನಾವಣಾ ಕಣಕ್ಕಿಳಿದಿದ್ದರು.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ರಾಮ್ ಸ್ವರೂಪ್ ಶರ್ಮಾ ಅವರು 2014 ಮತ್ತು 2019 ರಲ್ಲಿ ಕ್ರಮವಾಗಿ 49.97% ಮತ್ತು 68.75% ಮತಗಳನ್ನು ಗಳಿಸಿದ್ದರು.
ಮಾರ್ಚ್ 17, 2021 ರಂದು ಶರ್ಮಾ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ವಿಕ್ರಮಾದಿತ್ಯ ಸಿಂಗ್ ಅವರ ತಾಯಿ ಪ್ರತಿಭಾ ಸಿಂಗ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.
ಕಳೆದ ಎರಡು ವರ್ಷಗಳಿಂದ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದ ಕಂಗನಾ ರಣಾವತ್, ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಅಧಿಕೃತವಾಗಿ ಬಿಜೆಪಿ ಸೇರಿದ್ದರು. ಈ ಬೆನ್ನಲ್ಲೇ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು.
ಇದನ್ನೂ ಓದಿ : ಲೋಕಸಭೆ ಫಲಿತಾಂಶ: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಹೀನಾಯ ಸೋಲು


