ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದ ರಾಜಸ್ಥಾನದ ಬನ್ಸ್ವಾರಾದಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯವಾದ ಸೋಲನ್ನು ಕಂಡಿದ್ದಾರೆ.
ಬನ್ಸ್ವಾರಾದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಂದ್ರಜೀತ್ ಸಿಂಗ್ ಮಾಳವಿಯಾ ವಿರುದ್ಧ ಭಾರತ್ ಆದಿವಾಸಿ ಪಕ್ಷದ (ಬಿಎಪಿ) ರಾಜ್‌ಕುಮಾರ್ ರೋಟ್ 2,47,054 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಇದು ವಾರಣಾಸಿಯಲ್ಲಿ ಪ್ರಧಾನಿ ಮೋದಿ ಪಡೆದುಕೊಂಡಿದ್ದ 1,52,513 ಮತಗಳ ಗೆಲುವಿಗಿಂತ ಹೆಚ್ಚಿನ ಅಂತರದ ಗೆಲುವಾಗಿದೆ.
ಬಿಎಪಿ 2023ರಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ವೇಳೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿತ್ತು. ಇದು 2017ರಲ್ಲಿ ಗುಜರಾತ್ ಮೂಲದ ಭಾರತೀಯ ಬುಡಕಟ್ಟು ಪಕ್ಷದಿಂದ(ಬಿಟಿಪಿ)ಯಿಂದ ಬೇರ್ಪಟ್ಟಿತು. 2023ರಲ್ಲಿ ಚೌರಾಸಿಯಿಂದ ರೋಟ್ ಬಿಎಪಿಯ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಅಭ್ಯರ್ಥಿ ಮಹೇಂದ್ರಜೀತ್ ಸಿಂಗ್ ಮಾಳವಿಯಾ ಬಗಿದೋರಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದರು. ಅವರು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ಸ್ವಾರಾದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಸೇರಿದ್ದರು. ಬಗಿದೊರಾ ಮತ್ತು ಬನ್ಸ್ವಾರಾ ಲೋಕಸಭಾ ಚುನಾವಣೆಯಲ್ಲಿ ಬಿಎಪಿ ಗೆಲುವನ್ನು ಕಂಡಿದೆ.
ರಾಜಸ್ಥಾನದ ಬನ್ಸ್ವಾರದಲ್ಲಿ ಏ.21ರಂದು ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್‌ನ ಗ್ಯಾರಂಟಿ ಎಂದು ಹೇಳಿದ್ದು, ಮುಸ್ಲಿಂ ಅಲ್ಪಸಂಖ್ಯಾತರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ದೇಶದ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದೆ. ಈ ‘ನಗರ ನಕ್ಸಲ್’ ಮನಸ್ಥಿತಿಯಿಂದ ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ‘ಮಂಗಲಸೂತ್ರ’ವನ್ನು ಸಹ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಹೋಗಬಹುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅವರು ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕುತ್ತಾರೆ, ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುತ್ತಾರೆ. ಅವರು ಅದನ್ನು ಯಾರಿಗೆ ಹಂಚುತ್ತಾರೆ? ಮನಮೋಹನ್ ಸಿಂಗ್ ಅವರ ಸರ್ಕಾರವು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿತ್ತು. ಇದನ್ನು ನುಸುಳುಕೋರರಿಗೆ ವಿತರಿಸಲಾಗುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಅನುಮೋದಿಸುತ್ತೀರಾ? ಇದು ನಿಮಗೆ ಸ್ವೀಕಾರಾರ್ಹವೇ? ನೀವು ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಸರ್ಕಾರಗಳಿಗೆ ಇದೆಯೇ? ತಾಯಂದಿರ ಮಂಗಳಸೂತ್ರದ ಮೌಲ್ಯವು ಚಿನ್ನ ಅಥವಾ ಅದರ ಬೆಲೆಯಲ್ಲಿಲ್ಲ, ಆದರೆ ಜೀವನದಲ್ಲಿ ಅವಳ ಕನಸುಗಳಿಗೆ ಸಂಬಂಧಿಸಿದೆ ಮತ್ತು ನೀವು ಅದನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದರು.
ಮೋದಿಯ ದ್ವೇಷದ ಭಾಷಣದ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000ಕ್ಕೂ ಅಧಿಕ ವ್ಯಕ್ತಿಗಳು ಒಟ್ಟಾಗಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿದ್ದರು. ಪ್ರಧಾನಿಯ ಹೇಳಿಕೆಯು ಗೊಂದಲ ಸೃಷ್ಟಿಸುತ್ತದೆ ಮತ್ತು ಲಕ್ಷಾಂತರ ಸಂವಿಧಾನವನ್ನು ಗೌರವಿಸುವ ಭಾರತೀಯ ನಾಗರಿಕರ ಭಾವನೆಗಳಿಗೆ ಘಾಷಿಗೊಳಿಸುತ್ತದೆ ಎಂದು ಪ್ರಧಾನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಇದನ್ನು ಓದಿ: 2024ರ ಜನಾದೇಶ: ಹುಸಿಯಾದ ಚುನಾವಣೋತ್ತರ ಸಮೀಕ್ಷೆ


