ಲೋಕಸಭೆ ಚುನಾವಣೆ 2024ರ ಫಲಿತಾಂಶ ನಿನ್ನೆ( ಜೂನ್ 4) ಪ್ರಕಟಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಒಟ್ಟು 543 ಸಂಸದೀಯ ಸ್ಥಾನಗಳಲ್ಲಿ 293 ಸ್ಥಾನಗಳನ್ನು ಗೆದ್ದಿದೆ. ಆದರೆ, ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿ ಕೇವಲ 243 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಗಳಿಸಲು ವಿಫಲವಾಗಿದೆ.
ಈ ನಡುವೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದರೂ ಮೋದಿಗೆ ಅಥವಾ ಬಿಜೆಪಿಗೆ ಮತ ಹಾಕದ ಹಿಂದೂಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಜೂನ್ 4ರಂದು ‘dhirendra_raghav_79’ಎಂಬ ಹೆಸರಿನ ವೆರಿಫೈಡ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ವಿಡಿಯೋದ ಜೊತೆಗೆ “ಮಂದಿರದ ಬದಲಿಗೆ ಮಸೀದಿ ನಿರ್ಮಿಸಲಾಗುವುದು” ಎಂದು ಬರೆಯಲಾಗಿದೆ. ಅಲ್ಲದೆ #dhokha #hindutemple #bjp ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಕೊಡಲಾಗಿದೆ.

ವಿಡಿಯೋ ಅಪ್ಲೋಡ್ ಮಾಡಿರುವ ಇನ್‌ಸ್ಟಾಗ್ರಾಂ ಖಾತೆಯ ಬಯೋ ಪರಿಶೀಲಿಸಿದಾಗ, ಅಲ್ಲಿ ‘ಧೀರೇಂದ್ರ ರಾಘವ್’ಕಲಾವಿದ ಎಂದು ಬರೆದಿರುವುದು ಕಂಡು ಬಂದಿದೆ. ಖಾತೆಯಲ್ಲಿ ಧೀರೇಂದ್ರ ರಾಘವ್ ಸಂದರ್ಭಕ್ಕೆ ತಕ್ಕಂತೆ ವೇಷ ತೊಟ್ಟು ಮಾಡಿರುವ ಹಲವು ವಿಡಿಯೋಗಳು ಇವೆ. ಮುಸ್ಲಿಂ ವ್ಯಕ್ತಿಯಂತೆ ವೇಷ ತೊಟ್ಟು ಮಾಡಿರುವ ವಿಡಿಯೋಗಳೂ ಇವೆ.
ಧೀರೇಂದ್ರ ರಾಘವ್ ಕುರಿತು ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ, ಆತನ ಫೇಸ್‌ಬುಕ್ ಖಾತೆಯೂ ಕಂಡು ಬಂದಿದೆ. ಅದರಲ್ಲಿ ಆತ ಉತ್ತರ ಪ್ರದೇಶದ ಆಗ್ರಾದವರು ಎಂದು ಬರೆಯಲಾಗಿದೆ. ಮುಸ್ಲಿಂ ವ್ಯಕ್ತಿಯಂತೆ ವೇಷ ತೊಟ್ಟು ಹಿಂದೂಗಳಿಗೆ ಬೈದಿರುವ ವೈರಲ್ ವಿಡಿಯೋ ಕೂಡ ಆತನ ಫೇಸ್‌ಬುಕ್ ಖಾತೆಯಲ್ಲಿ ಕಂಡು ಬಂದಿದೆ.

ನಾವು ನಡೆಸಿದ ಪರಿಶೀಲನೆಯಲ್ಲಿ ತಿಳಿದು ಬಂದ ವಿಷಯವೇನೆಂದರೆ, ” ರಾಮ ಮಂದಿರ ನಿರ್ಮಾಣದ ಬಳಿಕವೂ ಮೋದಿಗೆ ಮತ ಹಾಕದ ಹಿಂದೂಗಳಿಗೆ ಮುಸ್ಲಿಂ ವ್ಯಕ್ತಿ ಬೈದಿದ್ದಾರೆ ಎಂದು ವೈರಲ್ ಮಾಡಲಾಗಿರುವ ವಿಡಿಯೋದಲ್ಲಿರುವುದು ಮುಸ್ಲಿಂ ವ್ಯಕ್ತಿಯಲ್ಲ. ಅಲ್ಲಿರುವುದು ಇದೇ ಕಲಾವಿದ ಧೀರೇಂದ್ರ ರಾಘವ್. ಈತ ಬಿಜೆಪಿ ಮತ್ತು ಹಿಂದುತ್ವದ ಪರವಾಗಿ ಆಗಾಗ ವಿಡಿಯೋ ಮಾಡುತ್ತಿರುತ್ತಾನೆ.
ಈ ಬಾರಿ ಬಿಜೆಪಿ ಬಹುಮತ ಪಡೆಯದಿರಲು ಮತ್ತು ಅಯೋಧ್ಯೆಯಲ್ಲೇ ಬಿಜೆಪಿ ಅಭ್ಯರ್ಥಿ ಸೋಲಲು ಹಿಂದೂಗಳು ಮತ ಹಾಕದಿರುವುದೇ ಕಾರಣ. ಹೀಗೆ ಆದರೆ, ಕಾಂಗ್ರೆಸ್ ಸರ್ಕಾರ ಬರಲಿದೆ. ಮಂದಿರದ ಜಾಗದಲ್ಲಿ ಮುಸ್ಲಿಮರು ಮಸೀದಿ ನಿರ್ಮಿಸಲಿದ್ದಾರೆ ಎಂದು ಮುಸ್ಲಿಂ ವ್ಯಕ್ತಿಯ ವೇಷ ತೊಟ್ಟು ಧೀರೇಂದ್ರ ರಾಘವ್ ಹೇಳಿದ್ದಾರೆ.
ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಝಬೈರ್ ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಧೀರೇಂದ್ರ ರಾಘವ್ ಅವರದ್ದು, ಈತ ಮುಸ್ಲಿಂ ವ್ಯಕ್ತಿಯ ವೇಷ ತೊಟ್ಟು ಹಿಂದೂ-ಮುಸ್ಲಿಂ ನಡುವೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾನೆ ಎಂದಿದ್ದು, ಉತ್ತರ ಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಹೇಟ್ ಡಿಟೆಕ್ಟರ್ (Hate Detector) ಎಕ್ಸ್ ಖಾತೆಯಲ್ಲೂ ವೈರಲ್ ವಿಡಿಯೋ ಪೋಸ್ಟ್ ಮಾಡಲಾಗಿದ್ದು, “ಧೀರೇಂದ್ರ ರಾಘವ್ ಟೋಪಿ ಧರಿಸಿ ಮುಸ್ಲಿಂ ವ್ಯಕ್ತಿಯಂತೆ ನಟಿಸಿ ಹಿಂದೂಗಳನ್ನು ನಿಂದಿಸುವ ವಿಡಿಯೋವನ್ನು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸುವ ಕೋಮುವಾದಿ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ” ಎಂದು ಬರೆದುಕೊಂಡಿದೆ.

ಇದನ್ನೂ ಓದಿ : FACT CHECK : ಕಾಂಗ್ರೆಸ್, ಗಾಂಧಿ ಕುಟುಂಬ ಭಾರತವನ್ನು ಲೂಟಿ ಮಾಡುತ್ತಿದೆ ಎಂಬ ಕಾರ್ಟೂನ್ ಮಾರ್ಫ್ ಮಾಡಲಾಗಿದೆ


