2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತವನ್ನು ಪಡೆದುಕೊಂಡಿದ್ದರೂ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಉಂಟಾಗಿರುವ ದೊಡ್ಡ ಹಿನ್ನೆಡೆಯು ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿ ಪಾಳಯದಲ್ಲಿ ದೊಡ್ಡ ಆತಂಕವನ್ನುಂಟುಮಾಡಿದೆ.
ಮಹಾರಾಷ್ಟ್ರದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ 23 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಕೇವಲ 9 ಸ್ಥಾನಗಳನ್ನು ಮಾತ್ರ ಗಳಿಸಿಕೊಂಡಿದೆ. ಪ್ರಧಾನಿ ಮೋದಿ ಪ್ರಚಾರ ನಡೆಸಿದ ಬಹುತೇಕ ಕ್ಷೇತ್ರಗಳಲ್ಲಿ ಎನ್‌ಡಿಎ ಸೋಲು ಕಂಡಿದೆ. ಪ್ರಧಾನಿ ಮೋದಿ ಮಹಾರಾಷ್ಟ್ರದ 18 ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋ ನಡೆಸಿದ್ದರು. ಅದರಲ್ಲಿ 15 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಸೋಲನ್ನು ಕಂಡಿದ್ದಾರೆ.
ಮುಂಬೈ ಈಶಾನ್ಯ ಲೋಕಸಭಾ ಕ್ಷೇತ್ರದ ಘಾಟ್‌ಕೋಪರ್ ಪ್ರದೇಶದಲ್ಲಿ ಪ್ರಧಾನಿ ಮೋದಿ ರೋಡ್‌ಶೋ ನಡೆಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಿಹಿರ್ ಕೋಟೆಚಾ ಅವರನ್ನು ಶಿವಸೇನಾ(ಯುಬಿಟಿ) ಅಭ್ಯರ್ಥಿ ಸಂಜಯ್ ದಿನಾ ಪಾಟೀಲ್ 29,861 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪುಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುರಳೀಧರ್ ಮೊಹೋಲ್ ಪರ ಪ್ರಧಾನಿ ಮೋದಿ ಮತ ಯಾಚಿಸಿದ್ದರು. ಈ ಕ್ಷೇತ್ರದಲ್ಲಿ ಮೊಹೋಲ್ ಅವರನನ್ಉ ಕಾಂಗ್ರೆಸ್‌ನ ರವೀಂದ್ರ ಧಂಗೇಕರ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.
ನಾಸಿಕ್‌ನಲ್ಲಿ ಪ್ರಧಾನಿ ಮೋದಿ ಶಿವಸೇನಾ(ಶಿಂಧೆ ಬಣ) ಅಭ್ಯರ್ಥಿ ಹೇಮಂತ್ ಗೋಡ್ಸೆ ಪರ ಪ್ರಚಾರ ನಡೆಸಿದ್ದರು. ಈ ಕ್ಷೇತ್ರದಲ್ಲಿ ಶಿವಸೇನಾ(ಯುಬಿಟಿ) ಅಭ್ಯರ್ಥಿ ರಾಜಾಭಾವು ವಾಜೆ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೋಡ್ಸೆಯನ್ನು ಸೋಲಿಸಿದ್ದಾರೆ.
ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೋವಿಂದರಾವ್ ಚಿಖಾಲಿಕರ್ ಪಾಟೀಲ್ ಪರವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದರು. ಆದರೆ ಇಲ್ಲಿ ಮೋದಿಯ ಯಾವುದೇ ಮ್ಯಾಜಿಕ್ ನಡೆದಿಲ್ಲಿ, ಕಾಂಗ್ರೆಸ್ ಅಭ್ಯರ್ಥಿ ವಸಂತರಾವ್ ಬಲವಂತರಾವ್ ಗೆಲುವನ್ನು ಸಾಧಿಸಿದ್ದಾರೆ.
ಚಂದ್ರಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಸಚಿವ ಸುಧೀರ್ ಮುಂಗಂಟಿವಾರ್ಗಾಗಿ ಪರ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಮತಯಾಚಿಸಿದ್ದರು. ಆದರೆ ಸುಧೀರ್ ಮುಂಗಂಟಿವಾರ್ಗಾಗಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದಾರೆ. ಇಲ್ಲಿಂದ ಕಾಂಗ್ರೆಸ್‌ನ ಪ್ರತಿಭಾ ಧನೋರ್ಕರ್ ಆಯ್ಕೆಯಾಗಿದ್ದಾರೆ.
ಪ್ರಧಾನಿ ಮೋದಿ ಶಿವಸೇನೆಯ(ಶಿಂಧೆ ಬಣ) ರಾಜು ದೇವನಾಥ್ ಪರ್ವೆ ಪರವಾಗಿ ರಾಮ್‌ಟೆಕ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮತಯಾಚಿಸಿದ್ದರು. ಆದರೆ ಅವರು ಕಾಂಗ್ರೆಸ್‌ನ ಶ್ಯಾಮ್ ಕುಮಾರ್ ಬರ್ವೆ ಅವರ ಎದುರು ಸೋಲನ್ನು ಕಂಡಿದ್ದಾರೆ. ವಾರ್ಧಾದಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ತಡಸ್ ಪರವಾಗಿ ಪ್ರಧಾನಿ ಮೋದಿ ಮತಾಯಾಚಿಸಿದ್ದರು. ಆದರೆ, ತಡಸ್ ಅವರನ್ನು ಎನ್‌ಸಿಪಿ(ಎಸ್‌ಪಿ) ಅಭ್ಯರ್ಥಿ ಅಮರ್ ಕಾಳೆ ಸೋಲಿಸಿದ್ದಾರೆ.
ಪ್ರಧಾನಿ ಮೋದಿ ಪರ್ಭಾನಿಯಲ್ಲಿ ಎನ್‌ಡಿಎ ಅಭ್ಯರ್ಥಿ ಮಹದೇವ್ ಜಾಂಕರ್ ಪರ ಪ್ರಚಾರ ಮಾಡಿದ್ದರು. ಆದರೆ ಶಿವಸೇನಾ (ಯುಬಿಟಿ) ಅಭ್ಯರ್ಥಿ ಸಂಜಯ್ ಜಾಧವ್ ಭಾರಿ ಮತಗಳ ಅಂತರದಿಂದ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ಕೊಲ್ಲಾಪುರ ಕ್ಷೇತ್ರದಲ್ಲಿ ಹಾಲಿ ಸಂಸದ ಮತ್ತು ಶಿವಸೇನೆ (ಶಿಂಧೆ ಬಣ) ಅಭ್ಯರ್ಥಿ ಸಂಜಯ್ ಮಾಂಡ್ಲಿಕ್ ಪರವಾಗಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದರು. ಆದರೆ ಅವರು ಕಾಂಗ್ರೆಸ್‌ನ ಶಾಹು ಮಹಾರಾಜ್ ಛತ್ರಪತಿ ಎದುರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ಸತ್ಪುತೆ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದರು. ಆದರೆ ಕಾಂಗ್ರೆಸ್‌ನ ಪ್ರಣಿತಿ ಶಿಂಧೆ ಎದುರು ರಾಮ್ ಸತ್ಪುತೆ ಸೋಲನುಭವಿಸಿದ್ದಾರೆ.


