ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಸಂಭವಿಸಿದ ಷೇರು ಮಾರುಕಟ್ಟೆ ಕುಸಿತ ಮತ್ತು ಹೂಡಿಕೆದಾರರ ನಷ್ಟದ ಬಗ್ಗೆ ವಿವರವಾದ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಅದಾನಿ-ಹಿಂಡೆನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ರಿಟ್ ಅರ್ಜಿಗೆ ವಕೀಲ ವಿಶಾಲ್ ತಿವಾರಿ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ರಿಟ್ ಅರ್ಜಿಗೆ ಸಂಬಂಧಿಸಿದಂತೆ ಈ ವರ್ಷದ ಜನವರಿಯಲ್ಲಿ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ನಿಯಂತ್ರಕ ಚೌಕಟ್ಟನ್ನು ಬಲಪಡಿಸಲು ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಗಣಿಸುವಂತೆ ಭಾರತ ಸರ್ಕಾರ ಮತ್ತು ಸೆಬಿಗೆ ಸೂಚಿಸಿತ್ತು.
ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಬಾಕಿ ಉಳಿದಿರುವ ತನಿಖೆಗಳನ್ನು ಸೆಬಿ ಪೂರ್ಣಗೊಳಿಸಿದೆಯೇ? ಯಾವುದಾದರು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆಯೇ? ಎಂಬುವುದು ಅಸ್ಪಷ್ಟವಾಗಿದೆ ಅರ್ಜಿದಾರ ವಕೀಲ ವಿಶಾಲ್ ತಿವಾರಿ ಅವರು ವಾದಿಸಿದ್ದಾರೆ.
ಮಧ್ಯಂತ ಅರ್ಜಿಯಲ್ಲಿ ತಿವಾರಿ ಅವರು ನ್ಯಾಯಾಲಯದ ನಿರ್ದೇಶನ ಪಾಲನೆಗೆ ಸೂಚಿಸಲು ಕೋರಿದ್ದಾರೆ. ಅಂದರೆ, ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸಲು ಸೆಬಿಗೆ ನಿರ್ದೇರ್ಶಿಸುವಂತೆ ಕೋರಿದ್ದಾರೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಕುಸಿತ ಕಂಡು ಬಂದಿದೆ ಎಂದು ತಿವಾರಿ ಹೇಳಿದ್ದಾರೆ. ಸುಮಾರು 20 ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
ಜೂನ್ 1ರಂದು ಕೆಲವು ಖಾಸಗಿ ಸಂಸ್ಥೆಗಳು ನಡೆಸಿದ್ದ ಎಕ್ಸಿಟ್ ಪೋಲ್‌ನಿಂದ ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ದೇಶದ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಇದು ಬೃಹತ್ ಹಗರಣ. ಇದರ ಬಗ್ಗೆ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ‘ಎಕ್ಸಿಟ್ ಪೋಲ್’ನಿಂದ ಷೇರು ಮಾರುಕಟ್ಟೆಯಲ್ಲಿ ₹30 ಲಕ್ಷ ಕೋಟಿ ನಷ್ಟ: ‘ದೇಶದ ಬೃಹತ್ ಹಗರಣ’ ಎಂದ ರಾಹುಲ್ ಗಾಂಧಿ


