ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಬಳಿ ಗೋ ಕಳ್ಳಸಾಗಣೆ ಶಂಕೆಯಲ್ಲಿ ಗುಂಪೊಂದು ಇಬ್ಬರನ್ನು ಥಳಿಸಿ ಹತ್ಯೆ ಮಾಡಿದ್ದು, ಮತ್ತೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಯ್‌ಪುರ ಜಿಲ್ಲೆಯ ಅರಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾನದಿ ಸೇತುವೆ ಮೇಲೆ ಗುರುವಾರ ಬೆಳಗಿನ ಜಾವ 2.20ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರಿಬ್ಬರನ್ನು ಚಾಂದ್ ಮಿಯಾನ್ ಮತ್ತು ಗುಡ್ಡು ಖಾನ್ ಎಂದು ಗುರುತಿಸಲಾಗಿದೆ. ಥಳಿತದಿಂದ ಗಾಯಗೊಂಡಿರುವ ಸದ್ದಾಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರೂ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಸೇತುವೆಯಿಂದ ಜಿಗಿದಿದ್ದಾರೆಯೇ ಅಥವಾ ಅವರಿಗೆ ಥಳಿಸಲಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲವಾದ್ದರಿಂದ ವಿಷಯ ತನಿಖೆಯಲ್ಲಿದೆ. ಮೃತರು ಮಹಾಸಮುಂಡ್‌ನ ಹಳ್ಳಿಯಿಂದ ಎಮ್ಮೆಗಳನ್ನು ತೆಗೆದುಕೊಂಡು ಒಡಿಶಾದ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಈ ವೇಳೆ ತಮ್ಮನ್ನು ಹಿಂಬಾಲಿಸಲಾಗುತ್ತಿದೆ ಎಂದು ಅನುಮಾನಿಸಿ ತಮ್ಮ ವಾಹನವನ್ನು ರಾಯ್‌ಪುರದ ಕಡೆಗೆ ತಿರುಗಿಸಿದ್ದರು ಎಂದು ಅರಂಗ್ ಪೊಲೀಸ್ ಠಾಣೆಯ ಉಸ್ತುವಾರಿ ಶೈಲೇಂದ್ರ ಸಿಂಗ್ ಶ್ಯಾಮ್ ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಎರಡು ಶವಗಳನ್ನು ಸೇತುವೆಯಿಂದ ಹೊರತೆಗೆದಿದ್ದಾರೆ. ಓರ್ವ ಗಾಯಾಳುವನ್ನು ರಾಯ್‌ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯದಂತೆ ತೋರುತ್ತದೆ. ಮೃತರು ಭಯದಿಂದ ನದಿಗೆ ಹಾರಿದ್ದಾರೆಯೇ ಅಥವಾ ಅವರನ್ನು ತಳ್ಳಲಾಗಿದೆಯೇ ಅಥವಾ ಕೊಲೆ ಮಾಡಿ ಎಸೆಯಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಶೈಲೇಂದ್ರ ಸಿಂಗ್ ಶ್ಯಾಮ್ ಹೇಳಿದ್ದಾರೆ.
ದುಷ್ಕರ್ಮಿಗಳನ್ನು ಗುರುತಿಸುವಲ್ಲಿ ಏನಾದರೂ ಬೆಳವಣಿಗೆಯಾಗಿದೆಯೇ ಎಂದು ಕೇಳಿದಾಗ, ಕೆಲವು ಸುಳಿವುಗಳು ಸಿಕ್ಕಿವೆ ಮತ್ತು ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಹಲ್ಲೆಗೊಳಗಾಗುವಾಗ ಖುರೇಷಿ ಮತ್ತು ಚಾಂದ್ ಘಟನೆ ವೇಳೆ ಮನೆಗೆ ಕರೆ ಮಾಡಿದ್ದರೆಂದು ಅವರ ಕುಟುಂಬ ಹೇಳುತ್ತಿದೆ. ಸಹಾಯಕ್ಕಾಗಿ ಖುರೇಷಿ ಕೂಗುತ್ತಿರುವುದು ಹಾಗೂ ನೀರು ಕೇಳುತ್ತಿರುವುದು ಕರೆಯ ವೇಳೆ ಕೇಳಿ ಬಂದಿದೆ ಎಂದು ಅವರ ಕುಟುಂಬ ಹೇಳಿದೆ. ಈ ಬಗ್ಗೆ ಮೃತರ ಕುಟುಂಬಗಳ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
https://twitter.com/zoo_bear/status/1799147249995231531
ಇದನ್ನು ಓದಿ: ಲೋಕಸಭೆಯ ತೀರ್ಪನ್ನು ಹೆಚ್ಚಿನ ಮುಸ್ಲಿಮರು ಭರವಸೆಯಿಂದ ಏಕೆ ನೋಡುತ್ತಾರೆ?


