ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವನ್ನು ಅವರ ಪತ್ನಿ ಸುನಿತಾ ಕೇಜ್ರಿವಾಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ವಿಡಿಯೋಗೆ ಲಿಂಕ್ ಮಾಡಿದ ಪೋಸ್ಟ್‌ಗಳನ್ನೂ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಅಮಿತ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ದೆಹಲಿ ಮೂಲದ ವಕೀಲ ವೈಭವ್ ಸಿಂಗ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಸುನಿತಾ ಕೇಜ್ರಿವಾಲ್ ಸೇರಿದಂತೆ ಒಟ್ಟು ಐವರಿಗೆ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ನ್ಯಾಯಾಲಯ ಸೂಚಿಸಿದೆ. ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 9ರಕ್ಕೆ ನಿಗದಿಪಡಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಮಾರ್ಚ್ 28ರಂದು ಎರಡನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದಾಗ ಅರವಿಂದ್ ಕೇಜ್ರಿವಾಲ್ ವಿಶೇಷ ನ್ಯಾಯಾಧೀಶ (ಪಿಸಿ ಕಾಯಿದೆ) ಕಾವೇರಿ ಬವೇಜಾ ಅವರನ್ನು ವೈಯಕ್ತಿಕವಾಗಿ ಉದ್ದೇಶಿಸಿ ಮಾತನಾಡಿದ್ದರು.
ಇದರ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸುನಿತಾ ಕೇಜ್ರಿವಾಲ್ ಕೂಡ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋವನ್ನು ತೆಗೆದು ಹಾಕುವಂತೆ ಎಕ್ಸ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ : ಕೇಂದ್ರ ಸಾಹಿತ್ಯ ಅಕಾಡೆಮಿ: ಯುವ ಪುರಸ್ಕಾರಕ್ಕೆ ಶ್ರುತಿ ಬಿಆರ್, ಬಾಲ ಪುರಸ್ಕಾರಕ್ಕೆ ಕೃಷ್ಣಮೂರ್ತಿ ಬಿಳಿಗೆರೆ ಆಯ್ಕೆ


