ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 16 ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿಗಳನ್ನು ಮತ್ತಷ್ಟು ವಿಚಾರಣೆ ಮಾಡಬೇಕಿದೆ. ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಬೇಕಿದೆ. ಹೀಗಾಗಿ ಕನಿಷ್ಠ ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ವೇಳೆ ಆರೋಪಿಗಳ ಪರ ವಕೀಲರು ಪೊಲೀಸ್ ಕಸ್ಟಡಿಗೆ ನೀಡಲು ವಿರೋಧಿಸಿದರು. ವಾದ ಪ್ರತಿವಾದಿ ಆಲಿಸಿದ ನ್ಯಾಯಾಧೀಶರು ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿದ್ದಾರೆ.
ಜೂನ್ 11ರಂದು ಬೆಳಿಗ್ಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಸಂಜೆ ವೇಳೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ನಾಳೆ ಕೊನೆಗೊಳ್ಳಲಿದೆ. ಆದರೆ, ನಾಳೆ ಭಾನುವಾರವಾದ ಹಿನ್ನೆಲೆ, ಇಂದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣ ಸಂಬಂಧ ಆರಂಭದಲ್ಲಿ 13 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಲಾಗಿತ್ತು. ಈಗ ಬಂಧಿತ ಆರೋಪಿಗಳ ಸಂಖ್ಯೆ 16ಕ್ಕೇರಿದೆ. ಹಾಗಾಗಿ, ಇಂದು 16 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ ಕಾರಣಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್‌ನಲ್ಲಿ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬವರನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್‌ಗೆ ಮುಂದುವರಿಸಲ್ಲ: ಸಚಿವ ಎಂ.ಬಿ.ಪಾಟೀಲ್


