ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ತೀವ್ರತರವಾದ ಶಾಖದ ಅಲೆಯ ನಡುವೆಯೂ ಜಲ ಬಿಕ್ಕಟ್ಟು ಸಹ ಉಲ್ಬಣಗೊಂಡಿದ್ದು, ದೆಹಲಿಯಲ್ಲಿನ ನೀರಿನ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ನೀರಿನ ಕೊರತೆಯಿಂದ ಕಂಗೆಟ್ಟ ಜನರು ಹಿಂಸಾಚಾರಕ್ಕೆ ಮುಂದಾಗಿದ್ದು, ದ್ವಾರಕಾದಲ್ಲಿ ಸಾರ್ವಜನಿಕ ನಲ್ಲಿಯಿಂದ ನೀರು ತುಂಬಿಸುವ ವಿವಾದದಲ್ಲಿ ಮೂವರು ಗಾಯಗೊಂಡಿದ್ದಾರೆ. ದ್ವಾರಕಾ ಸೆಕ್ಟರ್ 23 ರಲ್ಲಿ ನಡೆದ ಜಗಳದ ಕುರಿತು ಎರಡು ಪಿಸಿಆರ್ ಕರೆಗಳು ಬಂದಿವೆ ಮತ್ತು ತನಿಖೆಗಾಗಿ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
“ಆರಂಭದಲ್ಲಿ, ವಿವಾದದಿಂದಾಗಿ ಮೂವರು ಗಾಯಗೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಅವರನ್ನು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡೂ ಕಡೆಯವರ ಹೇಳಿಕೆಗಳ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಮಧ್ಯಪ್ರವೇಶಿಸುವಂತೆ ಆಪ್ ಶಾಸಕರು ಒತ್ತಾಯಿಸಿದ್ದಾರೆ. ಭಾನುವಾರ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರಿಗೆ ಪತ್ರ ಸಲ್ಲಿಸಿದ್ದು, ಹರಿಯಾಣ ರಾಷ್ಟ್ರ ರಾಜಧಾನಿಗೆ ನೀರು ಸರಬರಾಜು ಮಾಡುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ದೆಹಲಿ ನಿವಾಸಿಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸಿದೆ.
ದೆಹಲಿಯಲ್ಲಿ ನೀರಿನ ಸಮಸ್ಯೆ ಪ್ರತಿ ಕ್ಷಣವೂ ಗಂಭೀರವಾಗುತ್ತಿದೆ ಎಂದು ಎಎಪಿ ಶಾಸಕ ದಿಲೀಪ್ ಪಾಂಡೆ ಹೇಳಿದ್ದಾರೆ. “ತೀವ್ರ ಶಾಖವಿದ್ದು, ಈ ಬಿಸಿಲಿನ ತಾಪದಲ್ಲಿ ನೀರೇ ಜೀವನ, ನೀರಿನ ಬಿಕ್ಕಟ್ಟು ಎಂದರೆ ಜೀವನ ಬಿಕ್ಕಟ್ಟು” ಎಂದು ಪಾಂಡೆ ಹೇಳಿದರು.
ಪಕ್ಷದ ಎಲ್ಲ ಶಾಸಕರು ಶನಿವಾರ ಕೇಂದ್ರ ಜಲ ಶಕ್ತಿ ಸಚಿವರಿಗೆ ಪತ್ರ ಬರೆದಿದ್ದಾರೆ, ಅವರ ಎಲ್ಲ ಸಾರ್ವಜನಿಕ ಮತ್ತು ವೈಯಕ್ತಿಕ ಫೋನ್ ಸಂಖ್ಯೆಗಳಿಗೆ ಇಮೇಲ್ ಮತ್ತು ಸಂದೇಶ ಕಳುಹಿಸಿದ್ದಾರೆ. ದೆಹಲಿಯಲ್ಲಿ ಗಂಭೀರ ನೀರಿನ ಸಮಸ್ಯೆ ಇದೆ ಎಂದು ಹೇಳಿದ್ದಾರೆ ಎಂದು ಎಎಪಿ ನಾಯಕ ಹೇಳಿದರು. ಆದರೆ, ನಮ್ಮ ಭೇಟಿ ವೇಳೆ ಪಾಟೀಲ್ ಅವರ ನಿವಾಸದಲ್ಲಿ ಇರಲಿಲ್ಲ ಎಂದು ಎಎಪಿ ನಾಯಕರು ಹೇಳಿದ್ದಾರೆ.
ನಗರದ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಬಿಜೆಪಿ ಭಾನುವಾರ ‘ಮಟ್ಕಾ ಫೋಡ್’ ಪ್ರತಿಭಟನೆ ನಡೆಸಿತು. ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ನೇತೃತ್ವದಲ್ಲಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನೀರಿನ ಕೊರತೆಯ ಕುರಿತು ನಗರದ 14 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರದ ದುರಾಡಳಿತವನ್ನು ಆರೋಪಿಸಿದ ಸಚ್‌ದೇವ, “ದೆಹಲಿಯಲ್ಲಿ ನೀರಿನ ಕೊರತೆಯು ನೈಸರ್ಗಿಕ ಕಾರಣಗಳಿಂದಲ್ಲ. ಆದರೆ, ಆಮ್ ಆದ್ಮಿ ಪಕ್ಷದ ಅಸಮರ್ಪಕ ನಿರ್ವಹಣೆ ಮತ್ತು ನಿರ್ಲಕ್ಷ್ಯದ ಪರಿಣಾಮವಾಗಿದೆ ಎಂದು ನಾವು ಯಾವಾಗಲೂ ಸಮರ್ಥಿಸಿಕೊಂಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ; ದೆಹಲಿ: ಜಲ ಮಂಡಳಿ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರು


