ಯುಜಿಸಿ-ನೆಟ್ ಪರೀಕ್ಷೆಗಳ ರದ್ದತಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬುಧವಾರ ವ್ಯಂಗ್ಯವಾಡಿದ್ದು, ಕೇಂದ್ರ ಸರ್ಕಾರವನ್ನು ‘ಪೇಪರ್ ಸೋರಿಕೆ ಸರ್ಕಾರ’ ಎಂದು ಕರೆದಿದೆ. ಶಿಕ್ಷಣ ಸಚಿವರು ಈಗ ಜವಾಬ್ದಾರಿ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ನಿನ್ನೆ ದೇಶದ ವಿವಿಧ ನಗರಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆ ನಡೆಸಲಾಗಿತ್ತು. ಇಂದು ಪೇಪರ್ ಸೋರಿಕೆ ಶಂಕೆಯಿಂದ ಪರೀಕ್ಷೆ ರದ್ದುಗೊಳಿಸಲಾಗಿದೆ. ಮೊದಲು ನೀಟ್ ಪೇಪರ್ ಸೋರಿಕೆಯಾಗಿದೆ ಮತ್ತು ಇದೀಗ ಯುಜಿಸಿ-ನೆಟ್ ಪೇಪರ್ ಸೋರಿಕೆಯಾಗಿದೆ. ಮೋದಿ ಸರ್ಕಾರ ‘ಪೇಪರ್ ಲೀಕ್ ಸರ್ಕಾರ” ಎಂದು ಲೇವಡಿ ಮಾಡಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು “ನೀಟ್ ಪರೀಕ್ಷಾ ಪೇ ಚರ್ಚಾ” ಯಾವಾಗ ನಡೆಸುತ್ತಾರೆ ಎಂದು ಅವರು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಪ್ರರ್ಶನಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ನರೇಂದ್ರ ಮೋದಿಯವರೆ, ನೀವು ಪರೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚಿಸುತ್ತೀರಿ. ಆದರೆ, ನೀವು ಯಾವಾಗ ‘ನೀಟ್ ಪರೀಕ್ಷಾ ಪೇ ಚರ್ಚಾ’ ನಡೆಸುತ್ತೀರಿ. ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವುದು ಲಕ್ಷಾಂತರ ವಿದ್ಯಾರ್ಥಿಗಳ ಉತ್ಸಾಹದ ವಿಜಯವಾಗಿದೆ” ಎಂದು ಅವರು ಹೇಳಿದರು.
“ಇದು ಮೋದಿ ಸರ್ಕಾರದ ದುರಹಂಕಾರದ ಸೋಲು, ಇದರಿಂದಾಗಿ ಅವರು ನಮ್ಮ ಯುವಕರ ಭವಿಷ್ಯವನ್ನು ತುಳಿಯುವ ಹೇಯ ಪ್ರಯತ್ನವನ್ನು ಮಾಡಿದ್ದಾರೆ” ಎಂದು ಅವರು ಹೇಳಿದರು.
ನೀಟ್‌ನಲ್ಲಿ ಯಾವುದೇ ಪೇಪರ್ ಸೋರಿಕೆಯಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಮೊದಲು ಹೇಳುತ್ತಾರೆ. ಆದರೆ, ಬಿಹಾರ, ಗುಜರಾತ್ ಮತ್ತು ಹರಿಯಾಣದಲ್ಲಿ ಶಿಕ್ಷಣ ಮಾಫಿಯಾವನ್ನು ಬಂಧಿಸಿದಾಗ, ಸಚಿವರು “ಏನೋ ಹಗರಣ” ನಡೆದಿದೆ ಎಂದು ಒಪ್ಪಿಕೊಳ್ಳುತ್ತಾರೆ. ನೀಟ್ ಪರೀಕ್ಷೆಯನ್ನು ಯಾವಾಗ ರದ್ದುಗೊಳಿಸಲಾಗುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲೂ ನಿಮ್ಮ ಸರ್ಕಾರದ ರಿಗ್ಗಿಂಗ್ ಮತ್ತು ಪೇಪರ್ ಸೋರಿಕೆಯನ್ನು ತಡೆಯುವ ಜವಾಬ್ದಾರಿಯನ್ನು ಮೋದಿಜಿ ವಹಿಸಿಕೊಳ್ಳಿ ಎಂದು ಖರ್ಗೆ ಹೇಳಿದರು.
ಶಿಕ್ಷಣ ಸಚಿವಾಲಯವು ಯುಜಿಸಿ-ನೆಟ್ ರದ್ದುಗೊಳಿಸಿ ಆದೇಶಿಸಿದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ “ಭ್ರಷ್ಟಾಚಾರ ಮತ್ತು ಸೋರಿಕೆ” ಯುವಕರಿಗೆ ಹಾನಿಕಾರಕವಾಗಿದೆ ಎಂದು ಪ್ರಿಯಾಂಕಾ ಆರೋಪಿಸಿದರು.
“ನೀಟ್ ಪರೀಕ್ಷೆಯಲ್ಲಿ ಹಗರಣದ ಸುದ್ದಿಯ ನಂತರ, ಇದೀಗ ಜೂನ್ 18 ರಂದು ನಡೆದ ನೆಟ್ ಪರೀಕ್ಷೆಯನ್ನು ಅಕ್ರಮಗಳ ಭೀತಿಯಿಂದ ರದ್ದುಗೊಳಿಸಲಾಗಿದೆ, ಈಗ ಹೊಣೆಗಾರಿಕೆಯನ್ನು ಸರಿಪಡಿಸಲಾಗುತ್ತದೆಯೇ? ಶಿಕ್ಷಣ ಸಚಿವರು ಈ ಲೋಪಕ್ಕೆ ಹೊಣೆಗಾರರಾಗುತ್ತಾರೆಯೇ?” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ; ಅಣ್ಣಾಮಲೈ, ತಮಿಳಿಸೈ ಅವರನ್ನು ಟೀಕಿಸಿದ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದ ತಮಿಳುನಾಡು ಬಿಜೆಪಿ


