ಕಲ್ಲಕುರಿಚಿ ಕಳ್ಳಬಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 47 ಕ್ಕೆ ಏರಿದ್ದು, ಕನಿಷ್ಠ 30 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಮಿಳುನಾಡು ಸರ್ಕಾರ ಶುಕ್ರವಾರ ತಿಳಿಸಿದೆ. ಗುರುವಾರದವರೆಗೆ ಸಾವನ್ನಪ್ಪಿದ 29 ಜನರ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಮತ್ತು ಶವಗಳಿಗೆ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂದು ಕಲ್ಲಕುರಿಚಿ ಜಿಲ್ಲಾಧಿಕಾರಿ ಪ್ರಶಾಂತ್ ಎಂಎಸ್ ತಿಳಿಸಿದ್ದಾರೆ.
“ಕಲ್ಲಕುರಿಚಿ, ಜಿಪ್ಮರ್, ಸೇಲಂ ಮತ್ತು ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 165 ಜನರನ್ನು ನಕಲಿ ಮದ್ಯ ಸೇವಿಸಿ ದಾಖಲಿಸಲಾಗಿದೆ. ಅವರಲ್ಲಿ ಇದುವರೆಗೆ 47 ಮಂದಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 118 ಮಂದಿಯಲ್ಲಿ 30 ಮಂದಿಯ ಸ್ಥಿತಿ ಗಂಭೀರವಾಗಿದೆ” ಎಂದು ಅವರು ಹೇಳಿದರು.
“ಒಂದು ಸಮಾಧಾನಾಕರ ಸುದ್ದಿ ಎಂದರೆ, ಚಿಕಿತ್ಸೆ ಪಡೆಯುತ್ತಿದ್ದ ಮೂವರು ವ್ಯಕ್ತಿಗಳು ಚೇತರಿಸಿಕೊಂಡಿದ್ದಾರೆ” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಕಲ್ಲಾಕುರಿಚಿ ಜಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, “ಜಿಲ್ಲೆಯಲ್ಲಿ ಅಕ್ರಮ ಕಳ್ಳಬಟ್ಟಿ ಮಾರಾಟ ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ತಿಳಿಸಲಾಗಿದೆ” ಎಂದರು.
ಅಕ್ರಮ ಮದ್ಯ ಸೇವಿಸಿದವರು ಸ್ವಯಂ ಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅಗತ್ಯವಿದ್ದರೆ ಚಿಕಿತ್ಸೆಗೆ ಒಳಪಡಿಸಿ ಜೀವ ಬೆದರಿಕೆಯನ್ನು ತಪ್ಪಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ; ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆ; ಜಾಮೀನು ಆದೇಶಕ್ಕೆ ತಡೆ ನೀಡಿದ ದೆಹಲಿ ಹೈಕೋರ್ಟ್


