ಒಂದೇ ಮೊಬೈಲ್‌ನಲ್ಲಿ ಎರಡು ಸಿಮ್ ಕಾರ್ಡ್ ಹೊಂದಿರುವವರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದಂಡ ವಿಧಿಸಲು ಯೋಜಿಸುತ್ತಿದೆ ಎಂದು ಸುದ್ದಿಯೊಂದು ಹಬ್ಬಿದೆ.
ನೆಟ್‌ವರ್ಕ್ ಸೇವಾ ಪೂರೈಕೆದಾರರು ದಂಡದ ಹಣವನ್ನು ಒಂದು ದೊಡ್ಡ ಮೊತ್ತವಾಗಿ ಅಥವಾ ವಾರ್ಷಿಕ ಆಧಾರದ ಮೇಲೆ ಪಡೆದುಕೊಳ್ಳಬಹುದು ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುದ್ದಿಯ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ಗೂಗಲ್‌ನಲ್ಲಿ ಕೀ ವರ್ಡ್ಸ್ ಬಳಸಿ ಮಾಹಿತಿ ಹುಡುಕಿದಾಗ ಜೂನ್ 13,2024ರಂದು ಎಕಾನಾಮಿಕ್ಸ್ ಟೈಮ್ಸ್ ಪ್ರಕಟಿಸಿರುವ ಸುದ್ದಿಯೊಂದು ದೊರೆತಿದೆ.
ಸುದ್ದಿಯಲ್ಲಿ ಟ್ರಾಯ್ ‘ಸಂಖ್ಯಾ ಸಂಪನ್ಮೂಲ ನಿಯಂತ್ರಣ'(regulate numbering resources) ಪ್ರಸ್ತಾಪವನ್ನು ಕೇಂದ್ರ ದೂರ ಸಂಪರ್ಕ ಸಚಿವಾಲಯದ ಮುಂದಿಟ್ಟಿದೆ ಎಂದು ಹೇಳಲಾಗಿದೆ.
ಟ್ರಾಯ್ ಫೋನ್ ನಂಬರ್‌ಗಳನ್ನು ‘ಪರಿಮಿತವಲ್ಲದ ಹೆಚ್ಚು ಮೌಲ್ಯಯುತವಾದ ಸಾರ್ವಜನಿಕ ಸಂಪನ್ಮೂಲ’ ಎಂದು ಪರಿಗಣಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ. ಆದ್ದರಿಂದ, ಕಡಿಮೆ ಬಳಕೆಯೊಂದಿಗೆ ಸಂಖ್ಯೆಗಳನ್ನು ಹೊಂದಿರುವ ಮೊಬೈಲ್ ಆಪರೇಟರ್‌ಗಳ ಮೇಲೆ ಶುಲ್ಕಗಳನ್ನು ವಿಧಿಸಲು ಯೋಜಿಸುತ್ತಿದೆ’ ಎಂದಿದೆ.

ದೀರ್ಘಾವಧಿಯವರೆಗೆ ಬಳಸದೆ ಇರುವ ಸಂಖ್ಯೆಗಳ ಮೇಲೆ ಗ್ರಾಹಕರಿಗೆ ಏಕರೂಪವಾಗಿ ಅಥವಾ ವಾರ್ಷಿಕ ಶುಲ್ಕದ ರೂಪದಲ್ಲಿ ದಂಡ ವಿಧಿಸಬಹುದು ಎಂದು ವರದಿ ಹೇಳಿದೆ.
ಒಂದು ಹೆಸರಿನಲ್ಲಿ ಎರಡು ಫೋನ್ ನಂಬರ್‌ಗಳಿದ್ದು, ಅವುಗಳಲ್ಲಿ ಒಂದನ್ನು ಮಾತ್ರ ಬಳಸಿ, ಇನ್ನೊಂದು ಬಳಸದೇ ಇದ್ದರೆ ಅಂಥವರ ಮೇಲೆ ಮಾತ್ರ ದಂಡ ವಿಧಿಸುವುದು ಪ್ರಸ್ತಾವಣೆಯಲ್ಲಿದೆ ಎಂದು ತಿಳಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ‘ರಾಷ್ಟ್ರೀಯ ಸಂಖ್ಯಾ ಯೋಜನೆಯ ಪರಿಷ್ಕರಣೆ‘ ಎಂಬ ಶೀರ್ಷಿಕೆಯಲ್ಲಿ ಜೂನ್ 6, 2024ರಂದು ಟ್ರಾಯ್ ಹೊರಡಿಸಿದ ಪ್ರಕಟನೆ ಅದರ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದೆ.
ಪ್ರಕಟಣೆಯಲ್ಲಿ, ಎರಡು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಕಾರಣಕ್ಕೆ ದಂಡ ವಿಧಿಸಲಾಗುತ್ತದೆ ಎಂದು ಎಲ್ಲೂ ಹೇಳಿಲ್ಲ.
ಆದರೆ, ಪ್ರಕಟಣೆಯ ಒಂದು ವಿಭಾಗದಲ್ಲಿ ವ್ಯಾನಿಟಿ ಸಂಖ್ಯೆಗಳ ಕುರಿತು ಚರ್ಚಿಸಲಾಗಿದೆ. ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿಗಳು) ಹಂಚಿಕೆ ಮಾಡಿದ ಸಂಖ್ಯೆಗಳನ್ನು ಗ್ರಾಹಕರು ಬಳಸಬಹುದು, ಬಳಸದೇ ಇರಬಹುದು ಅಥವಾ ಅವುಗಳನ್ನು ಸಂಗ್ರಹಿಸಿಡಬಹುದು. ಈ ಸಂಖ್ಯೆಗಳಿಗೆ ವ್ಯಾನಿಟಿ ಸಂಖ್ಯೆಗಳು ಎನ್ನಲಾಗುತ್ತದೆ. ಇಂತಹ ‘ಸಂಖ್ಯೆಗಳು ಸಂಪನ್ಮೂಲಗಳ ಅಸಮರ್ಥ ಬಳಕೆಗೆ’ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಟಿಎಸ್‌ಪಿಯಲ್ಲಿ ಬಳಕೆಯಾಗದ ಸಂಖ್ಯೆಗಳಿಗೆ ಒಂದು ಬಾರಿ ಅಥವಾ ಪ್ರತಿ ವರ್ಷ ಶುಲ್ಕಗಳನ್ನು ವಿಧಿಸುವುದು ನಿಷ್ಕ್ರಿಯಗೊಳಿಸಿದ ಫೋನ್ ನಂಬರ್‌ಗಳನ್ನು ಮರುಹಂಚಿಕೆ ಮಾಡದೆಯೇ ಹಿಡಿದಿಟ್ಟುಕೊಳ್ಳುವ ಟಿಎಸ್‌ಪಿಗಳ ಮೇಲೆ ಆರ್ಥಿಕ ನಿರಾಕರಣೆ ವಿಧಿಸುವುದನ್ನು ಟ್ರಾಯ್ ವಿವರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಕುರಿತು ಜೂನ್ 14ರಂದು ಟ್ರಾಯ್ ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, “ಒಂದಕ್ಕಿಂತ ಹೆಚ್ಚು ಸಿಮ್‌ಗಳು ಅಥವಾ ಸಂಖ್ಯೆಗಳು ಹೊಂದಿರುವ ಗ್ರಾಹಕರ ಮೇಲೆ ಶುಲ್ಕ ವಿಧಿಸಲು ಟ್ರಾಯ್ ಉದ್ದೇಶಿಸಿದೆ ಎಂಬುವುದು ಸುಳ್ಳು, ಆಧಾರ ರಹಿತ ಮತ್ತು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುವ ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : FACT CHECK : ವಸತಿ ಸಂಕೀರ್ಣದ ಮುಂದೆ ಜಾನುವಾರು ಹತ್ಯೆ ಮಾಡಿರುವ ವಿಡಿಯೋ ಭಾರತದ್ದಲ್ಲ


