ಹಿಂದೂಗಳಿಗೆ ನೀಡುವ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸುತ್ತಿದ್ದ ಮುಸ್ಲಿಮರ ಸುಮಾರು 40 ಹೋಟೆಲ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

“ಜಾಗ್ರತೆ ಹಿಂದೂಗಳೇ ಜಾಗ್ರತೆ…ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದ ಹೆದ್ದಾರಿಗಳಲ್ಲಿ 40ಕ್ಕೂ ಹೆಚ್ಚು ಮುಸ್ಲಿಂ ಡಾಬಾಗಳ ಮೇಲೆ ದಾಳಿ ನಡೆಸಿದ್ದು, ಈ ಎಲ್ಲಾ ಹೋಟೆಲ್‌ಗಳಲ್ಲಿ ಹಿಂದೂಗಳಿಗೆ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುವುದು ಪತ್ತೆಯಾಗಿದೆ. ಆ ಹೋಟೆಲ್‌ಗಳ ಬಗ್ಗೆ ಎಚ್ಚರದಿಂದಿರಿ. ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಹಿಂದೂ ಧರ್ಮವನ್ನು ನಾಶಮಾಡಲು, ಇವರ ಯಾವುದೇ ಆಹಾರ ಮಳಿಗೆಗಳಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಇಂತಹ ರಾಸಾಯನಿಕಗಳನ್ನು ಬಳಸುತ್ತಿರುವುದು ಪದೇಪದೇ ಬೆಳಕಿಗೆ ಬರುತ್ತಿವೆ. ಸಾಕಷ್ಟು ಕಡೆ ಸರ್ಕಾರಿ ಬಸ್ಸುಗಳನ್ನೂ ಇಂತಹದೇ ಹೋಟೆಲ್ ಗಳಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಲಾಗಿದೆ.
ಈ ಹಿಂದೆ ಇದೇ ಸುದ್ದಿಯನ್ನು “ತಮಿಳುನಾಡಿನ ಕೊಯಮತ್ತೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಬಿರಿಯಾನಿಯಲ್ಲಿ ಪುರುಷತ್ವ ಹರಣ ಔಷಧವನ್ನು ಸೇರಿಸಿದ್ದಾನೆ. ಈ ಬಿರಿಯಾನಿ ತಿನ್ನುವ ಗಂಡಸು ಅಥವಾ ಹೆಂಗಸರಿಗೆ ಮಕ್ಕಳಾಗೋದಿಲ್ಲ. ಹೀಗಾಗಿ, ಮುಸ್ಲಿಮರಿಂದ ಯಾವುದೇ ವಸ್ತು ಖರೀದಿಸಬೇಡಿ” ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿತ್ತು.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳ ಪೋಸ್ಟ್ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಬೇರೆ ಬೇರೆ ಸಂದರ್ಭಗಳ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸಿರುವುದು ನಮಗೆ ಗೊತ್ತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಫೋಟೋಗಳ ಬಗ್ಗೆ ಮಾಹಿತಿ ಕೆಳಗಿದೆ.
ಫೋಟೋ -1 :

ಈ ಫೋಟೋ ಯೂಟ್ಯೂಬ್ ವಿಡಿಯೋ ಒಂದರಿಂದ ತೆಗೆದುಕೊಳ್ಳಲಾಗಿದೆ. ಸ್ಟ್ರೀಟ್ ಫುಡ್ ಅಫಿಷಿಯಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ “Indian Muslim festival DUM BIRYANI Preparation for 30 People & STREET FOOD” ಎಂಬ ಶೀರ್ಷಿಕೆಯಲ್ಲಿ ಜುಲೈ 1, 2026ರಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಅದಕ್ಕೆ ಕೊಡಲಾಗಿದ್ದ ತಂಬ್‌ನೈಲ್ ಫೋಟೋ ಇದಾಗಿದೆ. ಈ ಫೋಟೋವನ್ನು ತಪ್ಪಾದ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗ್ತಿದೆ ಎಂದು ಜೂನ್ 10, 2020ರಂದು ಟೈಮ್ಸ್ ಆಫ್ ಇಂಡಿಯಾ ಸುದ್ದಿ ಮಾಡಿತ್ತು.

ಮುಸ್ಲಿಮರು ತಮ್ಮ ಕಾರ್ಯಕ್ರಮಗಳಿಗೆ ಮಾಡುವ ರುಚಿಯಾದ ದಮ್ ಬಿರಿಯಾನಿ ಹೇಗೆ ತಯಾರಿಸುವುದು ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.
ಫೋಟೋ -2 :

ಸಾಮಾಜಿಕ ಜಾಲತಾಣದ ಪೋಸ್ಟ್‌ನ ಎರಡನೇ ಫೋಟೋ ಉತ್ತರ ಪ್ರದೇಶದ ಬಿಜ್ನೂರ್‌ಗೆ ಸಂಬಂಧಿಸಿದ್ದಾಗಿದೆ. ಈ ಫೋಟೋವನ್ನು ಬಿಜ್ನೋರ್ ಪೊಲೀಸರು ಜುಲೈ 11, 2019ರಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಬಿಜ್ನೋರ್‌ನ ಶೆರ್ಕೋಟ್ ಠಾಣೆಯ ಪೊಲೀಸರು ಮದ್ರಸಾವೊಂದರ ಮೇಲೆ ದಾಳಿ ಮಾಡಿದ್ದು, ಶಸ್ತ್ರಾಸ್ತ್ರ ಮಾರಾಟ ದಂಧೆಯನ್ನು ಬೇಧಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು.

ಫೋಟೋ-3 :

ಸಮವಸ್ತ್ರ ಧರಿಸಿದ ಸಿಬ್ಬಂದಿ ಮಾತ್ರೆಗಳಿರುವ ಬಾಕ್ಸ್‌ಗಳನ್ನು ಪರಿಶೀಲಿಸುತ್ತಿರುವ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅವುಗಳ ಬಗ್ಗೆ ಮಾಹಿತಿ ಹುಡುಕಿದಾಗ, ಅದು “ಶ್ರೀಲಂಕಾದ ಕೊಲಂಬೋದಲ್ಲಿ ವಶಕ್ಕೆ ಪಡೆಯಲಾದ ಮಾದಕ ವಸ್ತುಗಳ ಫೋಟೋ ಎಂದು ತಿಳಿದು ಬಂದಿದೆ. ಈ ಫೋಟೋಗಳನ್ನು ಕಳೆದ ವರ್ಷ ತೆಗೆಯಲಾಗಿತ್ತು. ಡೈಲಿ ಮಿರರ್ ಆನ್‌ಲೈನ್ ಎಂಬ ಶ್ರೀಲಂಕಾ ಮಾಧ್ಯಮದ ಈ ಘಟನೆ ಕುರಿತು ವರದಿ ಮಾಡಿತ್ತು. ವರದಿಯಲ್ಲೂ ವೈರಲ್ ಆಗಿರುವ ಮಾತ್ರೆಗಳ ಫೋಟೋಗಳು ಇರುವುದನ್ನು ನೋಡಬಹುದು.

ನಾವು ನಡೆಸಿದ ಪರಿಶೀಲನೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಫೋಟೋ ಮತ್ತು ಮಾಹಿತಿ ಸಂಪೂರ್ಣ ಸುಳ್ಳು ಎಂಬುವುದು ತಿಳಿದು ಬಂದಿದೆ. ಮುಸ್ಲಿಮರ ವಿರುದ್ದ ದ್ವೇಷ ಹರಡುವ ಸಲುವಾಗಿ ಬೇರೆ ಬೇರೆ ಸಂದರ್ಭಗಳ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಲಾಗಿದೆ.
ಇದನ್ನೂ ಓದಿ : FACT CHECK : ಕೇರಳದ ಚರ್ಚ್‌ನಲ್ಲಿ ₹ 7 ಸಾವಿರ ಕೋಟಿ ಕಪ್ಪು ಹಣ ಪತ್ತೆಯಾಗಿದೆ ಎಂಬುವುದು ಸುಳ್ಳು


