“ಸನಾತನ ಧರ್ಮ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕು” ಎಂಬ ಹೇಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ಪ್ರಕರಣ ಸಂಬಂಧ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆ, ಸಚಿವ ಉದಯನಿಧಿ ಸ್ಟಾಲಿನ್ ಇಂದು (ಜೂನ್ 25) ಬೆಂಗಳೂರಿನ ಶಾಸಕರು-ಸಂಸದರ ವಿರುದ್ದದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಮುಂದೆ ಖುದ್ದು ಹಾಜರಾಗಿದ್ದರು.
ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು 5 ಸಾವಿರ ರೂಪಾಯಿ ನಗದು ಹಾಗೂ 50 ಸಾವಿರ ರೂ. ಮೊತ್ತದ ಆರೋಪಿಯ ವೈಯುಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದ್ದಾರೆ.
ಉದಯನಿಧಿ ಪರ ಹೈಕೋರ್ಟ್ ವಕೀಲರಾದ ಬಾಲಾಜಿ ಸಿಂಗ್, ಚೆನ್ನೈನ ವಿಲ್ಸನ್ ಹಾಗೂ ದೂರುದಾರರ ಪರ ಕರ್ನಾಟಕ ಹೈಕೋರ್ಟ್ ವಕೀಲ ಧರ್ಮಪಾಲ್ ಹಾಜರಿದ್ದರು.
ಇದೇ ಪ್ರಕರಣದ ಇನ್ನುಳಿದ ಮೂವರು ಆರೋಪಿಗಳ ವಿರುದ್ಧದ ವಿಚಾರಣಾ ಕೋರ್ಟ್‌ನ ಮುಂದಿನ ನ್ಯಾಯಿಕ ಪ್ರಕ್ರಿಯೆಗಳಿಗೆ ಹೈಕೋರ್ಟ್ ಈಗಾಗಲೇ ತಡೆ ನೀಡಿದೆ.
ಚೆನ್ನೈನ ತೆಯನಂಪೇಟೆಯಲ್ಲಿ 2023ರ ಸೆಪ್ಟೆಂಬರ್ 3ರಂದು ನಡೆದಿದ್ದ, ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ ದಲ್ಲಿ ಮಾತನಾಡಿದ್ದ ಸಚಿವ ಉದಯನಿಧಿ ಸ್ಟಾಲಿನ್, “ಸನಾತನ ಧರ್ಮ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕು” ಎಂದಿದ್ದರು.
ಇದನ್ನೂ ಓದಿ : ‘ಕೇರಳಂ’ ಎಂದು ರಾಜ್ಯದ ಹೆಸರು ಬದಲಾಯಿಸಲು ಎರಡನೇ ಬಾರಿಗೆ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ


