ಕ್ಯಾಂಪಸ್‌ನೊಳಗೆ ಹಿಜಾಬ್, ನಕಾಬ್, ಬುರ್ಖಾ, ಶಾಲು, ಟೋಪಿ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದ್ದ ಮುಂಬೈ ಕಾಲೇಜಿನ ನಿರ್ಧಾರ ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ (ಜೂನ್ 26) ವಜಾಗೊಳಿಸಿದೆ.
ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರ ವಿಭಾಗೀಯ ಪೀಠ,’ಕಾಲೇಜಿನ ಡ್ರೆಸ್‌ಕೋಡ್ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ’ ಎಂದಿದೆ.
ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಎರಡು ಮತ್ತು ಮೂರನೇ ವರ್ಷದ ವಿಜ್ಞಾನ ಪದವಿ ಕೋರ್ಸ್‌ನ ವಿದ್ಯಾರ್ಥಿನಿಯರು ಕಾಲೇಜಿನ ಡ್ರೆಸ್‌ಕೋಡ್ ನಿಯಮಗಳಲ್ಲಿ ಹಿಜಾಬ್ ಧಾರಣೆ ನಿಷೇಧಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಡ್ರೆಸ್ ಕೋಡ್ ನಮ್ಮ ಮೂಲಭೂತ ಹಕ್ಕುಗಳನ್ನು, ನಿರ್ದಿಷ್ಟವಾಗಿ ಧರ್ಮ, ಗೌಪ್ಯತೆ ಮತ್ತು ವೈಯಕ್ತಿಕ ಆಯ್ಕೆಯನ್ನು ಅಭ್ಯಾಸ ಮಾಡುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಕಳೆದ ವಾರ ವಿಚಾರಣೆಯ ಸಂದರ್ಭದಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನಿಲ್ ಅಂತೂರಕರ್ ” ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಚಿಹ್ನೆಗಳ ಪ್ರದರ್ಶನ ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಿಖ್ಖರ ಪೇಟದಂತಹ ಧರ್ಮದ ಮೂಲಭೂತ ಹಕ್ಕಿನ ಭಾಗವೆಂದು ಪರಿಗಣಿಸಲಾದ ವಸ್ತುಗಳಿಗೆ ಅವಕಾಶ ನೀಡಲಾಗಿದೆ” ಎಂದಿದ್ದರು.
“ಕಾಲೇಜಿನ ನಿರ್ಧಾರ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಮುಸ್ಲಿಮರನ್ನು ಗುರಿಯಾಗಿಸಿ ನಿಯಮ ರೂಪಿಸಿಲ್ಲ. ಧರ್ಮದ ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುವ ಧಾರ್ಮಿಕ ಚಿಹ್ನೆಗಳನ್ನು ಹೊರತು ಇತರ ವಸ್ತುಗಳ ಬಹಿರಂಗ ಪ್ರದರ್ಶನವನ್ನು ತಡೆಯುವುದು ಕಾಲೇಜಿನ ಉದ್ದೇಶವಾಗಿದೆ” ಎಂದು ಹೇಳಿದ್ದರು.
ಅರ್ಜಿದಾರರಾದ ವಿದ್ಯಾರ್ಥಿನಿಯರನ್ನು ಪ್ರತಿನಿಧಿಸಿದ್ದ ವಕೀಲ ಅಲ್ತಾಫ್ ಖಾನ್, “ಜೂನಿಯರ್ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪು ಮತ್ತು ಈ ಪ್ರಕರಣ ವ್ಯತ್ಯಸ್ಥವಾಗಿದೆ. ಈ ಪ್ರಕರಣ ಸಮವಸ್ತ್ರ ಅಲ್ಲದ ಡ್ರೆಸ್ ಕೋಡ್ ಹೊಂದಿರುವ ಹಿರಿಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ. ಯಾವುದೇ ಕಾನೂನು ಅಧಿಕಾರವಿಲ್ಲದೆ ವಾಟ್ಸಾಪ್ ಸಂದೇಶದ ಮೂಲಕ ಡ್ರೆಸ್ ಕೋಡ್ ಹೇರಲಾಗಿದೆ. ಇದು ಅರ್ಜಿದಾರರ ಆಯ್ಕೆಯ ಹಕ್ಕು, ದೈಹಿಕ ಸಮಗ್ರತೆ ಮತ್ತು ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ” ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಲೇಜು ಪರ ವಕೀಲ ಅನಿಲ್ ಅಂತೂರಕರ್ “ಡ್ರೆಸ್ ಕೋಡ್ ಮುಸ್ಲಿಮರಿಗೆ ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದರು. ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಸಾಬೀತುಪಡಿಸಲು ಅರ್ಜಿದಾರರಿಗೆ ಸವಾಲು ಹಾಕಿದ್ದರು. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನಹರಿಸಬೇಕು. ಧಾರ್ಮಿಕ ಸಂಕೇತಗಳನ್ನು ಪ್ರದರ್ಶಿಸಬಾರದು” ಎಂದು ಅವರು ವಾದಿಸಿದ್ದರು.
“ಅರ್ಜಿದಾರರು ಕಾಲೇಜಿಗೆ ಪ್ರವೇಶ ಪಡೆಯುವಾಗಲೇ ಡ್ರೆಸ್ ಕೋಡ್ ಬಗ್ಗೆ ತಿಳಿದಿದ್ದರು ಎಂದು ಅಂತೂರಕರ್ ಒತ್ತಿ ಹೇಳಿದ್ದರು. ಭವಿಷ್ಯದಲ್ಲಿ ಯಾರಾದರೂ ಇತರ ಧಾರ್ಮಿಕ ಚಿಹ್ನೆಗಳಾದ ಗದಾ (ಮಚ್ಚು) ಅಥವಾ ಭಗವಾ (ಕೇಸರಿ) ಬಟ್ಟೆಗಳನ್ನು ಧರಿಸಿದರೆ, ಅದನ್ನೂ ಕೂಡ ಕಾಲೇಜು ಆಕ್ಷೇಪಿಸುತ್ತದೆ” ಎಂದು ತಿಳಿಸಿದ್ದರು.
ಇದನ್ನೂ ಓದಿ : “ಪ್ರತಿ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದಿಲ್ಲ ಎಂಬ ನಿರೀಕ್ಷೆಯಿದೆ”: ನೂತನ ಸ್ಪೀಕರ್‌ಗೆ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹೇಳಿಕೆ


