ಕೇರಳದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ತನ್ನ ಮಗನನ್ನೇ ಮದುವೆಯಾಗಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗ್ತಿದೆ.

“ಝೀನತ್ ಜಹಾನ್ ಎಂಬ ಕೇರಳದ ಮುಸ್ಲಿಂ ಮಹಿಳೆಯ ಪತಿ ನಿಧನರಾಗಿದ್ದು, ಆಕೆಗೆ ಮೂವರು ಮಕ್ಕಳಿದ್ದಾರೆ. ಮಹಿಳೆ ತನ್ನ ಹಿರಿಯ ಮಗನನ್ನೇ ತನ್ನ ಮನೆಯಲ್ಲೇ ಮದುವೆಯಾಗಿದ್ದಾಳೆ” ಎಂದು ಬರೆದುಕೊಂಡು ಅನೇಕರು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಮಹಿಳೆಯೊಬ್ಬರು ಮುಸ್ಲಿಮರ ಧಾರ್ಮಿಕ ಟೋಪಿ ಧರಿಸಿದ ಹುಡುಗನಿಗೆ ಹೂವಿನ ಹಾರ ಹಾಕಿ ಆಲಂಗಿಸುವುದು ನೋಡಬಹುದು.
ಫ್ಯಾಕ್ಟ್ ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್‌ನಲ್ಲಿ ಈ ಕುರಿತು ಮಾಹಿತಿ ಹುಡುಕಿದಾಗ ಜೂನ್ 23, 2024ರಂದು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಈ ಕುರಿತು ಸ್ಪಷ್ಟನೆ ನೀಡಿರುವುದು ಕಂಡು ಬಂದಿದೆ.

ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಝುಬೈರ್ “ಕುರಾನ್ ಅಧ್ಯಯನ ಮುಗಿಸಿ ಬಂದ ಮಗನನ್ನು ತಾಯಿ ಅಭಿನಂದಿಸುತ್ತಿರುವ ವಿಡಿಯೋವನ್ನು ಮುಸ್ಲಿಂ ಮಹಿಳೆ ಮಗನನ್ನೇ ಮದುವೆಯಾಗಿದ್ದಾರೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗ್ತಿದೆ. ಮುಖ್ಯವಾಗಿ @swetasamadhiya ಎಂಬ ಎಕ್ಸ್ ಖಾತೆಯಿಂದ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಖಾತೆಯನ್ನು ಪ್ರಧಾನಿ ಮೋದಿ ಕೂಡ ಫಾಲೋ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜೂನ್ 24ರಂದು ವಿಡಿಯೋ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ” ಬಿಜೆಪಿ ಬೆಂಬಲಿಗರು ಹಿಂದೂ-ಮುಸ್ಲಿಂ ನಡುವೆ ವಿಷ ಬೀಜ ಬಿತ್ತುವ ಮೂಲಕ ಅಸಹ್ಯ ಕೆಲಸ ಮಾಡುತ್ತಿದ್ದಾರೆ. ಕುರಾನ್ ಅಧ್ಯಯನ ಪೂರ್ತಿಗೊಳಿಸಿದ ಮಗನನ್ನು ತಾಯಿ ಪ್ರೀತಿಯಿಂದ ತಬ್ಬಿಕೊಂಡ ವಿಡಿಯೋವನ್ನು ಬಿಜೆಪಿಯ ಕೊಳಕು ಬೆಂಬಲಿಗರು ತಾಯಿ ಮಗನ್ನೇ ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇಂತಹ ಕೊಳೆಕು ಜನರು, ಈ ರಾಕ್ಷಸರು ಸಮಾಜದಲ್ಲಿ ಬದುಕಲು ಯೋಗ್ಯರಲ್ಲ” ಎಂದು ಖಾರವಾಗಿ ಹೇಳಿದ್ದರು.

ನಾವು ಗಮನಿಸಿದಂತೆ ಕೇರಳದಲ್ಲಿ ತಾಯಿ ಮಗನನ್ನು ಮದುವೆಯಾದ ಬಗ್ಗೆ ಇತ್ತೀಚೆಗೆ ಎಲ್ಲೂ ಸುದ್ದಿಯಾಗಿಲ್ಲ. ವಿಶೇಷವಾಗಿ ಮಹಿಳೆಯ ಹೆಸರನ್ನು ಝೀನತ್ ಜಹಾನ್ ಎಂದು ಹೇಳಲಾಗಿದೆ. ಕೇರಳದಲ್ಲಿ ಮುಸ್ಲಿಂ ಮಹಿಳೆಯರ ಹೆಸರಿನ ಮುಂದೆ ಜಹಾನ್, ಬೇಗಂ ಎಂಬ ಸರ್ ನೇಮ್ ಬಳಸುವುದಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದನ್ನು ಖಚಿತಪಡಿಸಬಹುದು.
ಇದನ್ನೂ ಓದಿ : FACT CHECK : ಮುಸ್ಲಿಮರು ಹಿಂದೂಗಳಿಗೆ ನೀಡುವ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಿದ್ದಾರೆ ಎಂಬುವುದು ಸುಳ್ಳು


