ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ವರ್ಷದ ಹಿಂದೆ ಸಿಬ್ಬಂದಿಗೆ ತರಬೇತಿ ನಡೆಸಿದ್ದಕ್ಕೆ,ಈಗ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
2022ರ ನವೆಂಬರ್ 4 ಮತ್ತು 5ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ಕೆಎಸ್‌ಹೆಚ್‌ಇಸಿ) ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಜಂಟಿಯಾಗಿ ‘Financial Education and Investment Awareness Course’ವಿಷಯಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ನಡೆಸಿತ್ತು. ಅದರ ಶುಲ್ಕ 150 ರೂಪಾಯಿಯನ್ನು ಪಾವತಿಸುವಂತೆ ಈಗ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
2021-22ನೇ ಸಾಲಿನಲ್ಲಿ ಪ್ರವೇಶ ಪಡೆದು ಪ್ರಸ್ತುತ 6ನೇ ಸೆಮಿಸ್ಟರ್ ಬಿಎ, ಬಿಕಾಂ ಮತ್ತು ಬಿಎಸ್ಸಿ ತರಗತಿಗಳನ್ನು ವ್ಯಾಸಂಗ ಮಾಡುತ್ತಿರುವ (ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ 150 ರೂ. ಪಾವತಿಸುವಂತೆ ಪ್ರಾಂಶುಪಾಲರ ಕಚೇರಿಯಿಂದ 26 ಜೂನ್ 2024ರಂದು ಆದೇಶ ಹೊರಡಿಸಲಾಗಿದೆ.

ಪ್ರಸ್ತುತ ವಿದ್ಯಾರ್ಥಿಗಳು 6ನೇ ಸೆಮಿಸ್ಟರ್ ಪರೀಕ್ಷೆಗೆ ಅಣಿಯಾಗಿದ್ದು, ಪರೀಕ್ಷಾ ಶುಲ್ಕದ ಜೊತೆಗೆ ಹೆಚ್ಚುವರಿ 150 ರೂ. ಪಾವತಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಹಾಲ್ ಟಿಕೆಟ್ ತಡೆ ಹಿಡಿಯುವ ಎಚ್ಚರಿಕೆ ನೀಡಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿರುವ ಬಿಎಸ್ಸಿ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿ ವಿನಾಯಕ್ ” ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ ಎಂದು ನಾವು ಸರ್ಕಾರಿ ಕಾಲೇಜಿಗೆ ಸೇರಿದ್ದೇವೆ. ಇಲ್ಲೂ ಈ ರೀತಿ ಹೆಚ್ಚುವರಿ ಹಣ ಪಾವತಿಸಲು ಸೂಚಿಸಿದರೆ ಬಡ ವಿದ್ಯಾರ್ಥಿಗಳಾದ ನಾವು ಏನು ಮಾಡುವುದು? ಎಂದು ಅಳಲು ತೋಡಿಕೊಂಡಿದ್ದಾರೆ.
“ಪ್ರಸ್ತುತ 6ನೇ ಸೆಮಿಸ್ಟರ್ ಪರೀಕ್ಷೆ ಹತ್ತಿರ ಬಂದಿದೆ. ಆದರೆ, ನಮಗೆ 5ನೇ ಸೆಮಿಸ್ಟರ್ ಫಲಿತಾಂಶವನ್ನೇ ತಿಳಿಸಿಲ್ಲ. 6ನೇ ಸೆಮಿಸ್ಟರ್ ಪರೀಕ್ಷೆ ಕೂಡ ತಡವಾಗಿ ನಡೆಸಲಾಗ್ತಿದೆ. ಇದರಿಂದ ಸ್ನಾತಕ್ಕೋತ್ತರ ತರಗತಿಗೆ ಪ್ರವೇಶ ಪಡೆಯಲು ನಮಗೆ ಸಮಸ್ಯೆಯಾಗ್ತಿದೆ” ಎಂದಿದ್ದಾರೆ.
ಬಿಎ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿ ಮನೋಜ್ ಮಾತನಾಡಿ “ವರ್ಷಕ್ಕೆ 2,700 ರೂಪಾಯಿ ಕಾಲೇಜು ಶುಲ್ಕ ಪಾವತಿಸಿದ್ದೇವೆ. 5ನೇ ಸೆಮಿಸ್ಟರ್ ಪರೀಕ್ಷೆಗೆ 750 ರೂ. ಶುಲ್ಕ ಪಾವತಿಸಿದ್ದೇವೆ. ಈಗ 6ನೇ ಸೆಮಿಸ್ಟರ್‌ಗೆ ಶುಲ್ಕ ಹೆಚ್ಚಿಸಿ 950 ರೂ. ಮಾಡಲಾಗಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 150 ರೂ. ಪಾವತಿಸುವಂತೆ ಸೂಚಿಸಲಾಗಿದೆ. ಇದು ನಮಗೆ ಬಹಳ ಹೊರೆಯಾಗ್ತಿದೆ. 150 ರೂ. ಪಾವತಿಸದಿದ್ದರೆ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಹೆದರಿಸಿದ್ದಾರೆ. ಇದರಿಂದ ನಾವು ಇಕ್ಕಟ್ಟಿನ ಪರಿಸ್ಥಿಗೆ ಸಿಲುಕಿದ್ದೇವೆ” ಎಂದು ತಿಳಿಸಿದ್ದಾರೆ.
ಬಿಎ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿ ಸ್ನೇಹಾ ಮಾತನಾಡಿ, “ಎರಡು ವರ್ಷದ ಹಿಂದೆ ಸಿಬ್ಬಂದಿಗೆ ತರಬೇತಿ ನಡೆಸಿದ್ದಕ್ಕೆ ಈಗ ನಮ್ಮಿಂದ ಶುಲ್ಕ ವಸೂಲಿ ಮಾಡಲಾಗ್ತಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳಾದ ನಮಗೆ ಪರೀಕ್ಷಾ ಶುಲ್ಕದ ಜೊತೆಗೆ ಹೆಚ್ಚುವರಿ ಹಣ ಪಾವತಿಸಲು ಸಾಧ್ಯವಿಲ್ಲ. ನಾವು ಹೆಚ್ಚುವರಿ ಹಣ ಪಾವತಿಸುವುದೂ ಇಲ್ಲ. ಯಾವುದೇ ವಿದ್ಯಾರ್ಥಿಯೂ ಹಣ ಪಾವತಿಸಿಲ್ಲ. ಮುಂದಿನ ನಡೆಯ ಬಗ್ಗೆ ನಾವು ಚರ್ಚಿಸುತಿದ್ದೇವೆ” ಎಂದಿದ್ದಾರೆ.
ದೂರವಾಣಿ ಮೂಲಕ ನಾನುಗೌರಿ.ಕಾಂ ಜೊತೆ ಮಾತನಾಡಿರುವ ಮೂವರೂ ಕೂಡ “ನಮ್ಮಂತೆ ನೂರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ಅವರು “ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ವಿಶ್ವವಿದ್ಯಾನಿಲಯದ ಆದೇಶವನ್ನು ನಾವು ಪಾಲಿಸಿದ್ದೇವೆ. ಕೆಎಸ್‌ಹೆಚ್‌ಇಸಿ ಮತ್ತು ವಿವಿ ತರಬೇತಿ ನಡೆಸಿತ್ತು. ಈಗ ಶುಲ್ಕ ವಸೂಲಿ ಮಾಡುವಂತೆ ನಮಗೆ ಸೂಚಿಸಿದೆ. ನಾವು ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಈ ಬಗ್ಗೆ ವಿವಿಯನ್ನೇ ವಿಚಾರಿಸಬೇಕಿದೆ” ಎಂದು ಹೇಳಿದ್ದಾರೆ.

5ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿಲ್ಲ ಎಂಬ ವಿದ್ಯಾರ್ಥಿಗಳ ಆರೋಪದ ಬಗ್ಗೆ ಮಾತನಾಡಿದ ಅವರು ” ಕೋವಿಡ್ ಬಳಿಕ ಶೈಕ್ಷಣಿಕ ವರ್ಷ ಇನ್ನೂ ಹಳಿಗೆ ಬಂದಿಲ್ಲ. ಮುಂದಿನ ವರ್ಷದಿಂದ ಎಲ್ಲವೂ ಹಿಂದಿನ ರೀತಿಗೆ ಮರಳಲಿದೆ. ಜುಲೈ ತಿಂಗಳಲ್ಲಿ ಈ ಶೈಕ್ಷಣಿಕ ವರ್ಷ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನ ವಿದ್ಯಾರ್ಥಿಗಳ ಎಲ್ಲಾ ಫಲಿತಾಂಶ ಪ್ರಕಟಗೊಳ್ಳಲಿದೆ. ಸ್ನಾತಕ್ಕೋತ್ತರ ಪದವಿ ಪ್ರವೇಶಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ : 7ನೇ ತರಗತಿ ಮಕ್ಕಳಿಗೆ ನಟಿ ತಮನ್ನಾ ಕುರಿತ ಪಾಠ : ಪೋಷಕರಿಂದ ವಿರೋಧ


